

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಆರ್ಥಿಕತೆಗೆ ಕೃಷಿ ಕ್ಷೇತ್ರ ಒಂದು ಪ್ರಮುಖ ಆರ್ಥಿಕ ಮೂಲವಾಗಿದೆ ಎಂದು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಆ್ಯಂಡ್ ಎಕಾನಿಮಿಕ್ ಚೇಂಜ್‌ನ ವಿಶ್ರಾಂತ ನಿರ್ದೇಶಕ ಡಾ. ಆರ್. ಎಸ್ ದೇಶಪಾಂಡೆ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಡಾ. ಡಿ.ಸಿ. ಪಾವಟೆ ಸ್ಮಾರಕ ಪ್ರತಿಷ್ಠಾನದ ಮೂಲತತ್ವ ಉಪನ್ಯಾಸ ನಿಮಿತ್ತ ಕವಿವಿ ಸೆನೆಟ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಭಾರತದ ಭವಿಷ್ಯತ್ತಿನ ಕೃಷಿಕ್ಷೇತ್ರ: ಮಸುಕಾಗಿದೆ ಅಥವಾ ಉಜ್ವಲವಾಗಿದೆ ವಿಷಯ ಕುರಿತು ಏರ್ಪಡಿಸಿದ್ದ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಸ್ವತಂತ್ರ ನಂತರ ಕೃಷಿ ಮೇಲೆ ಅವಲಂಬಿತವಾಗ ಭಾರತ ಕೃಷಿಗೆ ಸಂಬಧಿಸಿದ ಭೂ ಸುಧಾರಣೆ ಕ್ರಮ ಕೈಗೊಂಡಿತು. 1960ರ ಮಧ್ಯ ಭಾಗದಲ್ಲಿ ಕೃಷಿ ಕ್ರಾಂತಿ ಜತೆಗೆ ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ನೀಡಲಾಯಿತು. ಆದರೆ ದಶಕಗಳಿಂದ ರೈತರಿಗೆ ಮಾರುಕಟ್ಟೆ ಬೆಂಬಲ ಬೆಲೆ ನೀಡಲು ಆಗಿತ್ತಿಲ್ಲ ಎಂದರು.
ಗ್ರಾಮೀಣ ವಲಯದಲ್ಲಿ ರೈತರು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಭಾರತದಲ್ಲಿ ದಶಕಗಳಿಂದ ಕೃಷಿ ಅಭಿವೃದ್ಧಿಗೆ ಅನೇಕ ಸಮಿತಿ ರಚಿಸಿದರೂ ಕೃಷಿಯಲ್ಲಿ ಸ್ಥಿರತೆ ತರಲು ಸಾಧ್ಯವಾಗಿಲ್ಲ. ಭೂ-ಸುಧಾರಣೆಗಳನ್ನು ಮರು ಪರಶೀಲನೆ ಜತೆಗೆ ಕೃಷಿ ಮಾರುಕಟ್ಟೆಗಳಲ್ಲಿ ಏಜೆಂಟ್‌ರ ಹಾವಳಿಯಿಂದ ರೈತರಿಗೆ ನಿಜವಾದ ಬೆಲೆ ಸಿಗುತ್ತಿಲ್ಲ. ಭವಿಷ್ಯದಲ್ಲಿ ಭೂ-ಸುಧಾರಣೆ, ಮಧ್ಯಸ್ಥಕಾರರ ನಿಯಂತ್ರಣ, ಬೆಳೆ ವಿಮೆ ಮತ್ತು ರೈತರಿಗೆ ಕೃಷಿಗೆ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಆಗಬೇಕಿದೆ ಎಂದರು.
ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜೇಮ್ಸ್ ಮಯಾಲ್ ಮಾತನಾಡಿ, ಕರ್ನಾಟಕ ವಿಶ್ವವಿದ್ಯಾಲಯ ಜತೆಗೆ ಹಲವು ವರ್ಷದ ಅನ್ಯೋನ್ಯ ಸಂಬಂಧ ಹೊಂದಿದ್ದು, ಮುಂದೆಯೂ ಕವಿವಿ ಜತೆಗಿನ ಶೈಕ್ಷಣಿಕ ಸಂಬಂಧ ಮುಂದುವರೆಯಲಿದೆ ಎಂದರು.
ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಿದ್ದರು. ಡಾ. ಡಿ.ಸಿ ಪಾವಟೆ ಪ್ರತಿಷ್ಠಾನದ ಫೆಲೋಶಿಪ್‌ಗೆ ಆಕಾಂಕ್ಷಾ ನಟಾನಿ, ಡಾ. ವಿನೋದ ಮಹದೇವನ್, ಶಿವಕುಮಾರ ಮಲಗಿಹಾಳ ಆಯ್ಕೆಯಾದರು.
ಪ್ರೊ. ಎಡ್ವರ್ಡ್ ವಿಲ್ಸನ್, ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ, ಮೌಲ್ಯಮಾಪನ ಕುಲಸಚಿವ ಸಿ. ಕೃಷ್ಣಮೂರ್ತಿ ಡಾ. ಆರ್.ಆರ್.ಬಿರಾದರ, ಡಾ.ಎಸ್.ಟಿ. ಬಾಗಲಕೋಟಿ, ಡಾ.ಬುರ್ಜಿಕಿ, ಡಾ.ಎಸ್,ಎಚ್ ವಿಶ್ವನಾಥ, ಕಾಲೇಜು ವಿದ್ಯಾರ್ಥಿಗಳು, ಸಂಶೋಧಕರು, ಇತರರು ಇದ್ದರು. ಡಾ. ಡಿ.ಸಿ ಪಾವಟೆ ಪ್ರತಿಷ್ಠಾನ ಸ್ಮಾರಕ ಮೂಲತತ್ವ ಉಪನ್ಯಾಸದ ಸಂಯೋಜಕ ಪ್ರೊ. ಬಿ.ಎಚ್. ನಾಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು.