ದೇಶದ ಆರ್ಥಿಕ ಭದ್ರತೆಗೆ ಕಾರ್ಮಿಕ ಶ್ರಮ ಅಪಾರ: ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಶ್ಲಾಘನೆ

15_HSN_03
Published on

ಹಾಸನ: ರೈತನಂತೆ ಕಾರ್ಮಿಕ ಸಹ ಈ ದೇಶದ ಬೆನ್ನೆಲುಬು. ಶ್ರಮದಿಂದ ದುಡಿದು ಜೀವನ ನಡೆಸುವವನೇ ಕಾರ್ಮಿಕ. ತನ್ನ ಬದುಕಿಗೆ ಭದ್ರತೆ ಇಲ್ಲದಿದ್ದರೂ ದೇಶದ ಆರ್ಥಿಕ ಭದ್ರತೆಗೆ ಕಾರ್ಮಿಕರು ದುಡಿಯುತ್ತಾರೆ. ಇಂತಹವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುವ ಅಸಂಘಟಿತ ಕಾರ್ಮಿಕ ಸಂಘದ ಕೆಲಸ ಉತ್ತಮವಾಗಿದೆ ಎಂದು ಹಾಸನ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ಹಾಸನ ಜಿಲ್ಲಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಷ್ಟು ಸಂಘಟಿತರಾಗಿ ಕಾರ್ಯಕ್ರಮ ನಡೆಸುತ್ತಿರುವುದರಿಂದ ನಿಮ್ಮದು ಅಸಂಘಟಿತ ಸಂಘವಲ್ಲ, ಇದು ಸುಸಂಘಟಿತ ಸಂಘವಾಗಿದೆ. ಪಕ್ಷಬೇಧವಿಲ್ಲದೆ ಕಾರ್ಮಿಕರಿಗಾಗಿ ಸವಲತ್ತುಗಳನ್ನು ನೀಡಿ ನೆರವಾಗುವ ಜನಪ್ರತಿನಿಧಿಗಳಿಂದ ಕಾರ್ಮಿಕರ ಬದುಕು ಹಸನಾಗಲಿ ಎಂದು ಹಾರೈಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಸಂಘಟನೆ ಕೆಲಸ ಉತ್ತಮವಾಗಿದೆ ಎಂದರು.

ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ಸಂಸ್ಥಾಪಕ ಅಧ್ಯಕ್ಷ ಕುಪೇಂದ್ರ ಆಯನೂರು ಮಾತನಾಡಿ, ಸರ್ಕಾರಿ ಸೌಲಭ್ಯಗಳು ಸಿಗದಂತಹ ಸಮಾಜದ ಶೋಷಿತ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸವಲತ್ತು ದೊರಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. ಈ ಹಿಂದೆ ನಮ್ಮ ಸಂಘಟನೆಯಿಂದ ಕಾರ್ಮಿಕ ವರ್ಗಕ್ಕೆ ಶೋಷಿತ ಸಮುದಾಯಕ್ಕೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸರ್ಕಾರಗಳಿಗೆ ಒತ್ತಡ ಹಾಕಿ ಸೌಲಭ್ಯಗಳನ್ನು ಪಡೆಯುವಂತೆ ಮಾಡುವಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ಪಾತ್ರ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ಕಾರ್ಯಾಧ್ಯಕ್ಷೆ ರತ್ನಮಾಲಾ ಸುರೇಶ್ ಮೂಳೆ, ರಮೇಶ್ ಕುಣಿಗಲ್, ಪ್ರಧಾನ ಕಾರ್ಯದರ್ಶಿ ಇಂದಿರಾ ಬಸವನಗೌಡ, ರಾಜ್ಯ ಕಾನೂನು ಸಲಹೆಗಾರ ಚೇತನ್ ಲಕ್ಕಪ್ಪ, ಕಾರ್ಯದರ್ಶಿ ಕುಮಾರ್, ರಾಜ್ಯ ಉಪಾಧ್ಯಕ್ಷ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಮಹೇಶ್ ಪೇಟ್ಕರ್, ಜಿಲ್ಲಾಧ್ಯಕ್ಷ ಎಸ್.ಎಸ್.ರಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಸಗೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net