

ಮೂಡಿಗೆರೆ: ವಿವಿಧ ಸ್ತರಗಳಲ್ಲಿ ದೇಶದ ಅಭಿವೃದ್ಧಿಗೆ ಪಣತೊಟ್ಟಿರುವ ಹಾಗೂ ಜನರಿಗೆ ಉನ್ನತ ಸೌಲಭ್ಯ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿ ಯೋಜನೆಯಿಂದ ಭಾರತ ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೇರಿದೆ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಮಂಗಳವಾರ ವಿಶ್ವಕರ್ಮ ಯೋಜನೆಯಡಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮಂಜೂರಾಗಿರುವ ಕೈಗಾರಿಕಾ ಕರಕುಶಲ ವಸ್ತುಗಳ ತಯಾರಿಕಾ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಯುವ ಜನತೆಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಗೆ ಮುಕ್ತಿ ದೊರಕಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ದೇಶಾದ್ಯಂತ ವಿಶ್ವಕರ್ಮ ಯೋಜನೆಯಲ್ಲಿ ಕೋಟ್ಯಂತರ ಮಂದಿಗೆ ಕರಕುಶಲ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ಸಾಲ, ಸೌಲಭ್ಯವನ್ನು ನೀಡುವ ಯೋಜನೆ ಜಾರಿಯಲ್ಲಿದೆ. ನಿರುದ್ಯೋಗಿ ಫಲಾನುಭವಿಗಳು ಕೈಗಾರಿಕೆ ಆರಂಭಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಅವಕಾಶವಿದೆ. ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಉದ್ಯೋಗಕ್ಕಾಗಿ ಅಲೆದಾಡುವ ಬದಲು ಸ್ವಂತ ಉದ್ಯೋಗದ ಮೂಲಕ ದುಡಿದು ಕುಟುಂಬ ನಿರ್ವಹಣೆ ಮಾಡುವಂತಾಗಬೇಕು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸಬೇಕು. ಜಿಲ್ಲೆಯಲ್ಲಿ 7 ಸಾವಿರ ಫಲಾನಿಭವಿಗಳಿದ್ದಾರೆ. 2 ವರ್ಷದ ಹಿಂದೆ ಕರಕುಶಲ ವಸ್ತುಗಳ ತಯಾರಿಕೆ ಬಗ್ಗೆ ಸರ್ಕಾರದ ಯೋಜನೆ ಜಾರಿಗೆ ಬಂದಿದೆ ಎಂದು ತಿಳಿಸಿದರು.
ಪಪಂ ಸದಸ್ಯ ಮನೋಜ್‌ಕುಮಾರ್, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಟಿ.ಎಂ.ಗಜೇಂದ್ರ, ಸಂತೋಷ್ ಕೋಟ್ಯಾನ್, ವಿನೋದ್ ಕಣಚೂರು, ನಯನ ತಳವಾರ, ಸುನೀಲ್, ಶಶಿ, ರತನ್ ಊರುಬಗೆ, ಎಂ.ಸಿ.ಆದರ್ಶ, ಅಂಚೆಕಚೇರಿ ಮುಖ್ಯಸ್ಥ ಮಹೇಂದ್ರ ಇತರರಿದ್ದರು.