ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆ ಪಾತ್ರ ಪ್ರಮುಖ

Published on

ಚಾಮರಾಜನಗರ: ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆ ಪ್ರಮುಖ ಪಾತ್ರ ವಹಿಸುವುದರಿಂದ ಪ್ರತಿಯೊಬ್ಬ ಅನಕ್ಷರಸ್ಥರು ಅಕ್ಷರ ಕಲಿತು ನವಸಾಕ್ಷರರಾಗುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ತಿಳಿಸಿದರು.

ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿತಿಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಡಿಜಿಟಲ್ ಯುಗದಲ್ಲಿ ಸಾಕ್ಷರತೆಯನ್ನು ಉತ್ತೇಜಿಸುವ ಘೋಷವಾಕ್ಯದಡಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಾದ್ಯಂತ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ದೇಶದ ಪ್ರಗತಿಯಲ್ಲಿ ಸಾಕ್ಷರತೆ ಬಹುಮುಖ್ಯ ಪಾತ್ರ ವಹಿಸಲಿದೆ. ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿ ಸಾಕ್ಷರರ ಸಂಖ್ಯೆ ಬಹಳ ಕಡಿಮೆ ಇತ್ತು. ಸ್ವಾತಂತ್ರ್ಯ ನಂತರ ದೇಶದಲ್ಲಿ ಪ್ರತಿಯೊಬ್ಬರನ್ನು ಸಾಕ್ಷರರನ್ನಾಗಿಸುವ ಸಂಕಲ್ಪ ಹೊಂದಲಾಯಿತು. ಪ್ರಸ್ತುತ ದೇಶವು ಸಾಕ್ಷರತೆಯಲ್ಲಿ ಶೇ.75 ಪ್ರಗತಿ ಸಾಧಿಸಿದೆ. ಕರ್ನಾಟಕವು ಶೇ.70 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ಶೇ.61 ಇದೆ. ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮದಡಿ ಗ್ರಾಮಗಳನ್ನು ಆಯ್ಕೆ ಮಾಡಿ ಕಲಿಕಾ ತರಗತಿಗಳ ಮೂಲಕ ನವಸಾಕ್ಷರರ ಪ್ರಮಾಣವನ್ನು ಹೆಚ್ಚಿಸಬೇಕಿದೆ ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್.ಲಿಂಗರಾಜು ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣ ವಂಚಿತರನ್ನು ನವಸಾಕ್ಷರರನ್ನಾಗಿಸಲು ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮದಡಿ ಕಳೆದ ಸಾಲಿನಲ್ಲಿ 1 ಸಾವಿರ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸಿ 6240 ಅನಕ್ಷರಸ್ಥರನ್ನು ಗುರುತಿಸಲಾಗಿದ್ದು, 312 ಕಲಿಕಾ ಕೇಂದ್ರಗಳಲ್ಲಿ ಅಕ್ಷರ ಕಲಿಸಲಾಗುತ್ತಿದೆ. 2025ರ ಜುಲೈನಲ್ಲಿ ನಡೆದ ವಯಸ್ಕರ ಶಿಕ್ಷಣ ಪರೀಕ್ಷೆಯಲ್ಲಿ 2,331 ಜನರು ಅಕ್ಷರಸ್ಥರಾಗಿ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಹನೂರು ತಾಲೂಕಿನ ಅಜ್ಜೀಪುರ ಹಾಗೂ ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮ ಆಯ್ಕೆಯಾಗಿದ್ದು, 2,500 ಅನಕ್ಷರಸ್ಥರಿಗೆ ಬೋಧನೆ ಆರಂಭಿಸಲಾಗಿದೆ ಎಂದರು.

ಇದೇ ವೇಳೆ ವಯಸ್ಕರ ಶಿಕ್ಷಣ ಕಲಿಕಾ ಶಿಬಿರಗಳಿಂದ ನವಸಾಕ್ಷರರಾಗಿರುವವರಿಗೆ ಜಿಪಂ ಸಿಇಒ ಮೋನಾ ರೋತ್ ಪ್ರಮಾಣ ಪತ್ರ ವಿತರಿಸಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕಾಶಿನಾಥ್, ಉಪನ್ಯಾಸಕ ನಾಗರಾಜು, ಶಾಲೆಯ ಮುಖ್ಯ ಶಿಕ್ಷಕ ಕೌಸರ‌್ಯ, ಬ್ಲಾಕ್‌ಮಟ್ಟದ ಸಂಪನ್ಮೂಲ ವ್ಯಕ್ತಿ ಸವಿತಾ, ಶಿವಮೂರ್ತಿ, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಹೇಮಾ, ವಯಸ್ಕರ ಶಿಕ್ಷಣ ಇಲಾಖೆ ಸಹಾಯಕಿ ಶೋಭಾ ರಾಥೋಡ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಿಂಗರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net