

ಹಾಸನ: ದೇಶದಲ್ಲಿ ಕೃಷಿಯಿಂದ ಹಿಡಿದು ದೇವಸ್ಥಾನಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಹೇಳಿದರು.
ನಗರದ ಹಾಸನಾಂಬ ಕಲ್ಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಸಮುದಾಯದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸಮುದಾಯ ದೇಶದ ಅಭಿವೃದ್ಧಿಗೆ ಮುಂಚೂಣಿ ಪಾತ್ರವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲರೂ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ವಿಶ್ವಕರ್ಮ ಸಮುದಾಯ ರಾಜಕೀಯವಾಗಿ ಸ್ಥಾನಮಾನ ಸಿಗಲಿದೆ. ನನ್ನ ತಂದೆಯ ನಾಲ್ಕು ಬಾರಿ ಶಾಸಕರಾಗಲು ನಿಮ್ಮಗಳ ಸಹಕಾರ ಹೆಚ್ಚಿದೆ. ಅದೇ ರೀತಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಲು ಸಾಕಷ್ಟು ಜನರು ಶ್ರಮಿಸಿದ್ದಾರೆ. ಹಾಸನದಲ್ಲಿ ಶೀಘ್ರದಲ್ಲಿ ಒಂದು ವಿಶ್ವಕರ್ಮ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು. ಈ ಸಂಬಂಧ ಜಾಗ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಸಮುದಾಯದ ಯಾವುದೇ ಕೆಲಸ ಕಾರ್ಯಗಳಿದ್ದರೂ ಅದನ್ನು ಪ್ರಾಮಾಣಿಕವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ ಮಾತನಾಡಿ, ದೇಶದ ಜಿಡಿಪಿ ಮತ್ತು ದೇಶದ ಅಭಿವೃದ್ಧಿಯಲ್ಲಿ ವಿಶ್ವಕರ್ಮ ಅವರ ಜಾಣ್ಮೆ ಶಕ್ತಿ ಅಪಾರವಾದದ್ದು ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪುರುಷೋತ್ತಮ್ ಮಾತನಾಡಿ, ವೇದಗಳ ಕಾಲದಿಂದಲೂ ಕೂಡ ವಿಶ್ವಕರ್ಮ ಜನಾಂಗ ದೇವಸ್ಥಾನಗಳ ನಿರ್ಮಾಣದಲ್ಲಿ ಹೆಸರುವಾಸಿಯಾಗಿದೆ. ಇವರು ನಿರ್ಮಿಸಿದ ಸಾಕಷ್ಟು ದೇಗುಲಗಳನ್ನು ಬ್ರಿಟಿಷರು ಮತ್ತು ಮುಸಲ್ಮಾನರ ದಾಳಿಯಿಂದ ನಶಿಸಿ ಹೋದವು. ಅಲ್ಲದೆ ನಮ್ಮ ಸಮುದಾಯಕ್ಕೆ ಅಗತ್ಯ ಪ್ರೋತ್ಸಾಹ ಸಹ ಸಿಗಲಿಲ್ಲ ಎಂದು ವಿಷಾದಿಸಿದರು.
ನಮ್ಮ ಸಮುದಾಯ ರಾಜಕೀಯವಾಗಿ ಪ್ರಾಬಲ್ಯಗೊಂಡಿಲ್ಲ. ಇದುವರೆಗೂ ಕೂಡ ಒಬ್ಬ ಎಂಎಲ್‌ಎಯನ್ನು ಕೂಡ ನಾವು ಆಯ್ಕೆ ಮಾಡಿಕೊಳ್ಳಲಾಗಿಲ್ಲ. ಅಲ್ಲದೆ ಉದ್ಯೋಗದಲ್ಲಿ ಮೀಸಲಾತಿ ಪಡೆಯುವಲ್ಲಿಯೂ ವಿಫಲರಾಗಿದ್ದೇವೆ. ಆದ್ದರಿಂದ ನಮ್ಮ ಸಮುದಾಯ ಒಗ್ಗಟ್ಟಿನಿಂದ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಈಗ ಕಟ್ಟಿರುವಂತಹ ದೇವಸ್ಥಾನಗಳಿಗೆ ಆದಾಯ ಬರುತ್ತಿಲ್ಲ. ಆದರೆ ನಾವು ನಮ್ಮ ಪೂರ್ವಜರು ಈ ಹಿಂದೆ ಕಟ್ಟಿರುವಂತಹ ಬೇಲೂರು- ಹಳೇಬೀಡು ದೇವಸ್ಥಾನಕ್ಕೆ ದೇಶ- ವಿದೇಶಗಳಿಂದಲೂ ಕೂಡ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದಲ್ಲಿ ಆಸಕ್ತಿ ವಹಿಸದೆ ಇರುವುದರಿಂದ ನಮ್ಮ ಕಲೆ ನಶಿಸಿ ಹೋಗುತ್ತಿದೆ. ಅದನ್ನ ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವಕರ್ಮ ಜಯಂತಿಯ ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಚಾಲನೆ ನೀಡಿದರು. ವಿವಿಧ ಕಲಾತಂಡಗಳು ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಾಸನಂಬ ಕಲಾ ಕ್ಷೇತ್ರಕ್ಕೆ ಆಗಮಿಸಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ ಚಂದ್ರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ತಾರಾನಾಥ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಜಿ.ಕುಮಾರ್ ಸೇರಿದಂತೆ ಇತರರು ಇದ್ದರು.