

ಚಿತ್ರದುರ್ಗ: ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಕಾರ್ಮಿಕ ಇಲಾಖೆ ವಿವಿಧ ಕಾಯ್ದೆಗಳು ಹಾಗೂ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಜಿಲ್ಲಾಮಟ್ಟದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕ ಇಲಾಖೆ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಹ ಕಾರ್ಮಿಕರು ತಪ್ಪದೆ ನೋಂದಾಯಿಸಿ ಕೊಳ್ಳಬೇಕು. ಯೋಜನೆಗಳು, ಕಾನೂನುಗಳ ಮಾಹಿತಿ ತಿಳಿದಿರಬೇಕೆಂದರು.
ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಅರ್ಹ ಕಾರ್ಮಿಕರಿಗೆ ಇಲಾಖೆ ಸೌಲಭ್ಯ ದೊರೆಯುವಂತೆ ಕಾರ್ಮಿಕ ಸಂಘಟನೆಗಳು ನೋಡಿಕೊಳ್ಳಬೇಕು. ದೇಶ ಕಾಯುವ ಸೈನಿಕರು, ಅನ್ನ ನೀಡುವ ರೈತರಂತೆ, ಕಾರ್ಮಿಕರು ಕೂಡ ದೇಶಕ್ಕೆ ಅಭಿವೃದ್ಧಿಗೆ ಬಹಳ ಮುಖ್ಯವೆಂದು ತಿಳಿಸಿದರು.
ಬಳ್ಳಾರಿ- ದಾವಣಗೆರೆ ಸಹಾಯಕ ಕಾರ್ಮಿಕ ಆಯುಕ್ತ ಡಾ.ಅವಿನಾಶ್‌ನಾಯ್ಕ ಮಾತನಾಡಿ, ಕಾರ್ಮಿಕ ವರ್ಗ ದೇಶದ ಬೆನ್ನೆಲುಬು ಎಂದು ಬಣ್ಣಿಸಿದರು.
ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್ ಮಾತನಾಡಿ, ಇಲಾಖೆ ವಿವಿಧ ಯೋಜನೆಗಳು, ಸೌಲಭ್ಯಗಳನ್ನು ಪರಿಚಯಿಸಲು ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಇಂಥ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಕಾರ್ಮಿಕರ ಭವಿಷ್ಯನಿಧಿ ಇಲಾಖೆ ಅಧಿಕಾರಿ ವೇಣುಗೋಪಾಲ್, ಕಾರ್ಮಿಕ ನಿರೀಕ್ಷಕರಾದ ರಾಜಣ್ಣ, ಅಲ್ಲಾಭಕ್ಷಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್‌ಕುಮಾರ್ ಇತರರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್, ಕಾರ್ಮಿಕ, ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ವಿಮಾ ಯೋಜನೆ ವೈದ್ಯಕೀಯ ಸೇವೆ ಹಾಗೂ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.