ದೇಶದ ಅಭಿವೃದ್ಧಿಗೆ ಪ್ರಧಾನಿ ಸಂಕಲ್ಪ -ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿಕೆ - ನನ್ನ ಮಣ್ಣು ನನ್ನ ದೇಶ ಅಭಿಯಾನ

dvg-kalasha-yatre.jpg
Published on

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸುತ್ತಿರುವ ಪ್ರತಿ ಯೋಜನೆಯ ಹಿಂದೆ ದೇಶದ ಅಭಿವೃದ್ಧಿ ಸಂಕಲ್ಪವಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಇಲ್ಲಿನ ಬಿ.ಎಸ್. ಚನ್ನಬಸಪ್ಪ ಪದವಿ ಕಾಲೇಜಿನಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು- ನನ್ನ ದೇಶ ಅಭಿಯಾನದಡಿ ಗುರುವಾರ ಹಮ್ಮಿಕೊಂಡಿದ್ದ ಅಮೃತ ಕಳಸ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಒಂದು ರಾಷ್ಟ್ರ ಒಂದು ಕಾರ್ಡ್‌ನತ್ತ ಹೆಜ್ಜೆ ಇಟ್ಟಿರುವ ನರೇಂದ್ರ ಮೋದಿ ಅವರು, ಒಂದು ದೇಶ ಒಂದು ಚುನಾವಣೆ ನಡೆಸುವ ತೀರ್ಮಾನ ಮಾಡಿದ್ದಾರೆ ಎಂದರು.

ನರೇಂದ್ರ ಮೋದಿ ಒಬ್ಬ ಅಪರೂಪದ ವ್ಯಕ್ತಿ. ವಿಶ್ವವೇ ಮೆಚ್ಚಿದ ನಾಯಕ. ಅವರು ಯೋಜಿಸುವ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಭಾಗಿಯಾಗುವ ಅಭಿಮಾನವಿದೆ. ನನ್ನ ಮಣ್ಣು-ನನ್ನ ದೇಶ ಅಭಿಯಾನ ಉತ್ತಮ ಉದ್ದೇಶ ಹೊಂದಿದೆ.

ಗ್ರಾಮಗಳಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನವದೆಹಲಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ಹುತಾತ್ಮ ಸೈನಿಕರ ಸ್ಥಳದಲ್ಲಿ ಸುಂದರ ಉದ್ಯಾನ ಮಾಡುವ ಉದ್ದೇಶವಿದೆ. ನವದೆಹಲಿಗೆ ಹೋದಾಗೆಲ್ಲ ನಮ್ಮ ಊರಿನ ಮಣ್ಣು ಇಲ್ಲಿದೆ ಎಂದು ಅಭಿಮಾನ ಪಡಲು ಅವಕಾಶ ಸಿಗಲಿದೆ ಎಂದರು.

ಗ್ರಾಮಾಂತರ ಭಾಗದ ವಿದ್ಯಾರ್ಥಿಗಳೇ ಐಎಎಸ್, ಐಪಿಎಸ್, ಐಎಫ್‌ಎಸ್ ಮೊದಲಾದ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಾಗಾಗಿ ವ್ಯಾಸಂಗಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಕೇವಲ ಗುಡಿ-ಗೋಪುರಗಳ ನಿರ್ಮಾಣಕ್ಕೆ ಜನರು ಅನುದಾನ ಕೇಳುವುದು ಸರಿಯಲ್ಲ. ಬದಲಾಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಬೇಕು ಎಂದು ಹೇಳಿದರು.

ಜವಳಿ ವರ್ತಕ ಬಿ.ಸಿ.ಉಮಾಪತಿ ಮಾತನಾಡಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಅಭಿವೃದ್ಧಿಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಧಾರ್ಮಿಕ ವಿಚಾರಧಾರೆಯಲ್ಲಿ ನಮ್ಮ ದೇಶ ವಿಶ್ವಕ್ಕೆ ಗುರುವಾಗಿದೆ ಎಂದರು.

ಇಂದಿನ ವಿದ್ಯಾರ್ಥಿ ಸಮುದಾಯದಲ್ಲಿ ರಾಷ್ಟ್ರಪ್ರೇಮ, ದೇಶಾಭಿಮಾನ ಬೆಳೆಸಬೇಕಿದೆ. ಅವರು ಭಾರತೀಯ ಧಾರ್ಮಿಕ ಪರಂಪರೆ ವಾಹಕರಾಗಬೇಕು. ಸಂಸ್ಕೃತಿ- ಸಂಸ್ಕಾರವಂತರಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಎಲ್.ಎ.ಕೃಷ್ಣಾ ನಾಯ್ಕ, ಇಒ ರಾಮಭೋವಿ, ನೆಹರು ಯುವಕ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯ ಸಂಜೀವ್, ದಾವಣಗೆರೆ ವಿವಿ ಸಾಮಾಜಿಕ ಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ. ತಿಪ್ಪೇಶ್, ದಾವಿವಿ ಎನ್ಸೆಸ್ಸೆಸ್ ಕಾರ್ಯಕ್ರಮಾಧಿಕಾರಿ ಅಶೋಕಕುಮಾರ್ ಪಾಳೇದ, ಪ್ರಾಚಾರ್ಯ ಷಣ್ಮುಖಪ್ಪ, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ಎಚ್.ಎನ್.ಶಿವಕುಮಾರ್, ಚಂದ್ರಶೇಖರ್ ಇತರರಿದ್ದರು. ಮಾಜಿ ಸೈನಿಕರಾದ ಗೋಪಾಲ್ ಸೇತ್ ಸನದಿ, ಮನೋಹರ್ ಮಹೇಂದ್ರಕರ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾಡಳಿತ, ಜಿಪಂ ತಾಪಂ, ನೆಹರು ಯುವ ಕೇಂದ್ರ, ದಾವಣಗೆರೆ ವಿವಿಯ ಎನ್ನೆಸ್ಸೆಸ್ ವಿಭಾಗ, ಪ್ರಧಾನ ಅಂಚೆ ಕಚೇರಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಎಸ್ ಚನ್ನಬಸಪ್ಪ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಗುರು ಸ್ವಾಗತಿಸಿದರು. ಎಚ್.ಜಿ.ರೇಖಾ ವಂದಿಸಿದರು.

ನಂತರ ಕಾಲೇಜು ಆವರಣದಿಂದ ಪ್ರಮುಖ ರಸ್ತೆಗಳ ಮೂಲಕ ಜಿಪಂ ಕಚೇರಿಯವರೆಗೆ ಅಮೃತ ಕಳಶ ಯಾತ್ರೆ ನಡೆಸಲಾಯಿತು. ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ, ನನ್ನ ಮಣ್ಣು ನನ್ನ ದೇಶ ಮೊದಲಾದ ಘೋಷಣೆ ಕೂಗಿದರು.

ಸ್ವಯಂಸೇವಕರಾದ ಕರಿಬಸಪ್ಪ, ನಿವೇದಿತಾ, ಪಲ್ಲವಿ, ಆಕರ್ಷ್ ಸೇರಿ ಐವರು ವಿದ್ಯಾರ್ಥಿಗಳು ಮಣ್ಣು ಸಂಗ್ರಹಿಸಲಾದ ಮಡಕೆಗಳನ್ನು ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರ ಮೂಲಕ ದೆಹಲಿಗೆ ರವಾನಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಗ್ರಾಮ, ತಾಲೂಕುವಾರು ಸಂಗ್ರಹಿಸಲಾದ ಮಣ್ಣಿನ ಮಡಕೆಗಳನ್ನು 20 ಮಂದಿ ನವದೆಹಲಿಗೆ ಅ. 27ಒಳಗೆ ಕಳುಹಿಸಲಾಗುವುದು ಎಂದು ಸಂಘಟಕರು ತಿಳಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net