

*ಭಾರತ ಸೇವಾದಳ ಜಿಲ್ಲಾಧ್ಯಕ್ಷ ವೆಂಕಟ ನಾಗಪ್ಪ ಶೆಟ್ಟಿ ಅಭಿಪ್ರಾಯ
*ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿ ಚಾಲನೆ
ಚಾಮರಾಜನಗರ: ದೇಶದ ಅಭಿವೃದ್ಧಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳು ಸಹಕಾರಿಯಾಗಿದೆ ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ವೆಂಕಟ ನಾಗಪ್ಪ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಅಮೆಚೂರ್ ನೆಟ್ ಬಾಲ್ ಅಸೋಸಿಯೇಷನ್ ಮತ್ತು ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 6ನೇ ಕಿರಿಯ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಈ ವರ್ಷದ ಮೊದಲ ತಿಂಗಳಲ್ಲಿ ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಸಂಸ್ಥೆ ಉದ್ಘಾಟನೆಯಾಗಿ, ವರ್ಷದ ಕೊನೆಯಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜನೆ ಮಾಡಿರುವುದು ಶ್ಲಾಘನೀಯ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಸ್ನೇಹ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿ ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ ಜಿಲ್ಲೆಯಲ್ಲೇ ನಡೆಯಲಿದೆ. ಚಾಮರಾಜನಗರದ ಇಬ್ಬರು ಕ್ರೀಡಾಪಟುಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಂತಹ ಕ್ರೀಡಾಕೂಟಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಯಾಗಲಿ ಎಂದು ಹೇಳಿದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಮಾನವನ ಭಾವನೆಗಳನ್ನು ನಿರ್ಮಾಣ ಮಾಡಲು ಕ್ರೀಡೆ ಅನುಕೂಲವಾಗಿದೆ. ಜಾನಪದ ಕಲೆಗಳು ತವರೂರು ಕ್ರೀಡಾಪಟುಗಳ ತವರೂರು ಆಗಲಿ. ಜಿಲ್ಲೆಯಲ್ಲಿರುವ ಕ್ರೀಡಾಂಗಣಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.
ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿ ಆಯೋಜನೆ ಮಾಡುವುದು ನನ್ನ ಕನಸಾಗಿತ್ತು. ಸುಮಾರು ಒಂದು ವರ್ಷಗಳಿಂದ ಈ ಪಂದ್ಯಾವಳಿ ಆಯೋಜನೆಗೆ ಶ್ರಮವಹಿಸವಾಗಿದೆ. 12 ಬಾಲಕರ ತಂಡ ಮತ್ತು 10 ಬಾಲಕಿಯರ ತಂಡ ಕ್ರೀಡಾಕೂಟದಲ್ಲಿ ಭಾಗವಹಿಸಿದೆ. ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಉತ್ತಮ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಕ್ರೀಡಾಕೂಟದಲ್ಲಿ ಬೆಳಗಾವಿ, ತುಮಕೂರು, ಮಂಡ್ಯ, ಮೈಸೂರು, ಹಾವೇರಿ, ದಕ್ಷಿಣ ಕನ್ನಡ, ರಾಮನಗರ, ಬೆಂಗಳೂರು ನಗರ, ಚಾಮರಾಜನಗರ ಸೇರಿದಂತೆ 12 ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು.
ಗೀನ್ ಅಗ್ರಿಟೆಕ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಾ.ಕೆ.ಶ್ರೀಕಂಠಮೂರ್ತಿ, ಅಮೆಚೂರ್ ನೆಟ್ ಬಾಲ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಗಿರೀಶ್, ನೆಟ್ ಬಾಲ್ ರಾಷ್ಟ್ರ ಮಟ್ಟದ ಕ್ರೀಡಾಪಟು ಸುರಭಿ, ಅನಿಲ್ ಕುಮಾರ್, ಉದ್ಯಮಿ ರಮೇಶ್, ಮಂಜುನಾಥ್, ಲೋಕೇಶ್, ಆಲೀಖಾನ್, ಶ್ರೀನಿವಾಸ್, ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ನರ್ಗೀಸ್ ಬಾನು, ಜಿಲ್ಲಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್, ಉಪಾಧ್ಯಕ್ಷ ಎ.ಸಿ.ವಿಶ್ವನಾಥ್, ಸಿ.ರಾಜೇಂದ್ರ, ಸುರೇಶ್ ಕುಮಾರ್, ಮಹದೇವಸ್ವಾಮಿ, ಮಧು ಕುಮಾರ್ ಹಾಗೂ ಇತರರು ಹಾಜರಿದ್ದರು.