ದೇಶದ ಅಡಿಪಾಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಡಾ.ಕಾವೇರಿ

28web
Published on

ಮೈಸೂರು: ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದಿಂದ ಶ್ರೀಮಂತಗೊಳಿಸುವ ಮೂಲಕ ದೇಶದ ಅಡಿಪಾಯವನ್ನು ನಿರ್ಮಿಸುವಲ್ಲಿ ಶಿಕ್ಷಕರು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂದು ವಾಕ್ ಮತ್ತು ಭಾಷ ತಜ್ಞೆ ಡಾ.ಕಾವೇರಿ ಸೋಮಶೇಖರ್ ಅಭಿಪ್ರಾಯಪಟ್ಟರು.
ವಿಜಯನಗರ 4ನೇ ಹಂತದಲ್ಲಿರುವ ಸಮರ್ಥನಂ ಬುದ್ಧಿವಿಕಲಚೇತನರ ವಿಶೇಷ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಯುವ ಪೀಳಿಗೆಗೆ ಜ್ಞಾನವನ್ನು ರವಾನಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟುಕೊಳ್ಳುವ ತ್ಯಾಗಿಗಳು. ಅವರು ಸಮಾಜದ ಪ್ರಗತಿಗೆ ಪ್ರಮುಖರಾಗಿದ್ದು, ಮುಂಬರುವ ಪೀಳಿಗೆಯ ಭವಿಷ್ಯವನ್ನು ಭದ್ರಪಡಿಸುತ್ತಾರೆ. ಒಬ್ಬ ಆದರ್ಶ ಶಿಕ್ಷಕ ಯಾವಾಗಲೂ ಭಾವೋದ್ರಿಕ್ತನಾಗಿರುತ್ತಾನೆ. ಮಕ್ಕಳನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ ಎಂದು ಬಣ್ಣಿಸಿದರು.
ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿ, ಆದರ್ಶ ಶಿಕ್ಷಕರಾಗುವುದು ಕೇವಲ ತಂತ್ರ ಅಥವಾ ಬೋಧನಾ ಶೈಲಿಯನ್ನು ಸುಧಾರಿಸುವುದಕ್ಕೆ ಸೀಮಿತವಾಗಿಲ್ಲ. ಇದು ವಿದ್ಯಾರ್ಥಿಗಳೊಂದಿಗಿನ ಸಂಬಂಧವನ್ನು ಸುಧಾರಿಸಲು ಸಹ ಸಂಬಂಧಿಸಿದೆ. ಇಂತಹ ಶಿಕ್ಷಕರು ಯಾವುದೇ ದೇಶದ ಭವಿಷ್ಯದ ಆಧಾರ ಸ್ತಂಭಗಳು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕಿ ಭ್ರಮಾರಂಭ ಮಾತನಾಡಿ, ಶಿಕ್ಷಕರಾದ ನಾವುಗಳು ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವ ವ್ಯಕ್ತಿಗಳಾಗಿರಬೇಕು. ತಮ್ಮ ಸ್ವಂತ ಕ್ಷೇತ್ರಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಂದ ಇನ್ನಷ್ಟು ತಿಳಿದುಕೊಳ್ಳಬೇಕು. ತಮ್ಮನ್ನು ಉತ್ತಮಗೊಳಿಸಲು ನಿರಂತರವಾಗಿ ಕೆಲಸ ಮಾಡುವ ಮೂಲಕ, ಯಾವುದೇ ಶಿಕ್ಷಕರು ಆದರ್ಶ ಶಿಕ್ಷಕರಾಗಬಹುದು. ನಾವು ಪ್ರಪಂಚದಾದ್ಯಂತದ ಅನೇಕ ಜನರ ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಬಹುದು ಎಂದು ಹೇಳಿದರು.
ವಿಶೇಷ ಶಿಕ್ಷಕಿಯರಾದ ಪಿ.ಪದ್ಮ, ವಿದ್ಯಾವತಿ, ವಿನೋದ, ಈ. ಪವಿತ್ರ, ಪೋಷಕ ಪೃಥ್ವಿರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net