ದೇಶದ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ

h17-joshi bjp
Published on

ಹುಬ್ಬಳ್ಳಿ : ದೇಶದಲ್ಲಿ 33 ಲಕ್ಷ ಹಾಗೂ ರಾಜ್ಯದಲ್ಲಿ ಎರಡೂವರೆ ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆ ಇಡೀ ಜಗತ್ತಿಗೆ ಒಂದು ಸವಾಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಪೋಷಣ ಅಭಿಯಾನ ಸಂಸದರ ಆರೋಗ್ಯವಂತ ಮಗುವಿನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
2014 ರಿಂದ ಪೋಷಣ ಅಭಿಯಾನ ಆರಂಭಿಸಲಾಗಿದೆ. ಅಪೌಷ್ಟಿಕತೆಯಿಂದ ಹಲವಾರು ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿವೆ. 26 ಸಾವಿರ ಕೋಟಿ ಹಣವನ್ನು ಮಕ್ಕಳ ಪೋಷಣೆಗಾಗಿ ಖರ್ಚು ಮಾಡಲಾಗುತ್ತಿದೆ. 2030 ರೊಳಗೆ ಕುಪೋಷಣ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶ ಈ ಕಾರ್ಯಕ್ರಮ ಹೊಂದಿದೆ ಎಂದು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಮತ್ತು 6 ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ಮಾಡಲಾಯಿತು. ಸಿರಿಧಾನ್ಯಗಳಿಂದ ತಯಾರಿಸಿದ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಜಿ.ಪಂ. ಸಿಇಒ ಡಾ. ಸುರೇಶ ಇಟ್ನಾಳ, ಉಪಮೇಯರ್ ಉಮಾ ಮುಕುಂದ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಸೀಮಾ ಮೊಗಲಿಶೆಟ್ಟರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಎಂ., ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net