

ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರೃ ದೊರೆತ ದಿನವನ್ನು ಸುವರ್ಣ ಅಕ್ಷರಗಳಿಂದ ದಾಖಲಿಸಬೇಕಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ವಾತಂತ್ರ್ಯೋತ್ಸವದ ಹರ್‌ಘರ್ ತಿರಂಗಾ ಅಭಿಯಾನದಡಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ತಿರಂಗಾ ಯಾತ್ರೆಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಜತೆಗೂಡಿ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳ ಪ್ರತೀಕವಾಗಿ ಸ್ವಾತಂತ್ರ್ಯ ದಿನವನ್ನು ಅಚರಿಲಾಗುತ್ತಿದೆ. ಹರ್‌ಘರ್ ತಿರಂಗಾ ಅಭಿಯಾನದಡಿ ವಿವಿಧ ಕಾರ‌್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಒನಕೆ ಓಬವ್ವ ವೃತ್ತದಿಂದ ಪ್ರಾರಂಭವಾದ ಯಾತ್ರೆ,ಮದಕರಿನಾಯಕ, ಅಂಬೇಡ್ಕರ್ ವೃತ್ತ ಮಾರ್ಗ ನಗರದ ನೀಲಕಂಠೇಶ್ವರ ದೇವಾಲಯದವರೆಗೆ ತೆರಳಿ ಅಲ್ಲಿಂದ ಮರಳಿ ಒನಕೆ ಓಬವ್ವ ವೃತ್ತದಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ದೇಶಭಕ್ತಿ ಘೋಷಣೆಗಳು ಮೊಳಗಿದವು.
ಜಿಪಂ ಉಪಕಾರ‌್ಯದರ್ಶಿ ಕೆ.ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಂ.ವಿ.ವೀಣಾ, ಸುಧಾ ಮತ್ತಿತರರು ಉಪಸ್ಥಿತರಿದ್ದರು.