ದೇಶಕ್ಕೆ ಸೈನಿಕರ ಕೊಡುಗೆ ಆಪಾರ

CTD ----000002
Published on

ಚಿತ್ರದುರ್ಗ: ವಯೋವೃದ್ಧ ಪಾಲಕರನ್ನು ಕೀಳಾಗಿ ನೋಡುವುದು ಸರಿಯಲ್ಲವೆಂದು ಮಾಜಿ ಶಾಸಕ, ರೆಡ್ಡಿ ಜನಸಂಘದ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ರೆಡ್ಡಿ ಜನಸಂಘದಿಂದ ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಮಾಜಿ ಸೈನಿಕರು,ನಿವೃತ್ತ ಸರ್ಕಾರಿ ನೌಕರರು ಹಾಗೂ ರಾಷ್ಟ್ರ ಪ್ರಶಸ್ತಿಗೆ ಭಾಜನರಾದವರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬೆಳೆಸಿ, ದೊಡ್ಡವರನ್ನಾಗಿ ಮಾಡಿದ ತಂದೆ-ತಾಯಿಯರನ್ನು ಕಡೆಗಣಿಸುವ ಪ್ರವೃತ್ತಿ, ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಮನಸ್ಸಿಗೆ ನೋವು ತರಿಸುತ್ತದೆ. ವೃದ್ಧಾಶ್ರಮಗಳ ಹೆಚ್ಚಳ ನಮ್ಮ ದೇಶದ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದರು.
ಬೆಳೆಸಿದ, ಕಲಿಸಿದ ಪಾಲಕರನ್ನು, ನಡೆದು ಬಂದ ದಾರಿ ಹಾಗೂ ಸಾಮಾಜಿಕ ಬದ್ಧತೆಯನ್ನು ಎಂದಿಗೂ ಮರೆಯಬಾರದು. ಹಿರಿಯರನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದು ಮಕ್ಕಳ ಕರ್ತ್ಯವ್ಯ ಎಂದು ತಿಳಿಸಿದರು.
ನಾವಿಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ದೇಶ ಕಾಯುವ ಸೈನಿಕರ ಕೊಡುಗೆ ಆಪಾರ. ಆದ್ದರಿಂದ ಪ್ರತಿ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಮಾಜಿ ಸೈನಿಕರು, ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಗುವುದು ಎಂದರು.
ರೆಡ್ಡಿ ಜನಸಂಘ ರಾಜ್ಯದಲ್ಲೇ ಆರ್ಥಿಕವಾಗಿ ಸದೃಢವಾಗಿರುವ ಸಂಘಟನೆಯಾಗಿದೆ. ಇದಕ್ಕೆ ಸಮುದಾಯದ ಹಿರಿಯರ ಕೊಡುಗೆ ಆಪಾರ. ಈ ವರ್ಷದ ಪ್ರತಿಭಾ ಪುರಸ್ಕಾರಕ್ಕೆ 60 ಲಕ್ಷ ರೂ. ಅಧಿಕ ವೆಚ್ಚವಾಗಿದೆ. ಸಾಧನೆಯತ್ತ ಸಾಗುವುದಕ್ಕೆ ಪ್ರತಿಭಾ ಪುರಸ್ಕಾರ ಪ್ರೋತ್ಸಾಹವಾಗಿದೆ ಎಂದು ತಿಳಿಸಿದರು.
ಸಂಘದ ಕಾರ‌್ಯದರ್ಶಿ ಡಿ.ಕೆ.ಶೀಲಾ ಮಾತನಾಡಿ, ಸಮುದಾಯದ ಹಿರಿಯರ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ಶ್ರಮದ ಫಲವಾಗಿ 1916ರಲ್ಲಿ ಆರಂಭವಾದ ಸಂಘವಿಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಂಘವನ್ನು ಇನ್ನಷ್ಟು ಸದೃಢಗೊಳಿಸಲು ನಮ್ಮಲ್ಲಿರುವ ಅಂಹಕಾರ, ಸ್ವಾರ್ಥ ಮನೋಭಾವಗಳನ್ನು ತೊರೆಯಬೇಕಿದೆ ಎಂದರು.
ಸಂಘದ ನಿರ್ದೇಶಕ ದಾವಣಗೆರೆ ಮೆ.ಕಾ.ಮುರಳಿಕೃಷ್ಣ ಮಾತನಾಡಿ, ತಿಪ್ಪಾರೆಡ್ಡಿ ಅವರಂಥ ಹಿರಿಯರ ನೇತೃತ್ವದಲ್ಲಿ ಸಂಘ ಬಲಿಷ್ಠವಾಗಿದೆ ಎಂದು ತಿಳಿಸಿದರು.
ಸಂಘದ ಕಾರ‌್ಯದರ್ಶಿ ಕೆ.ಪರಶುರಾಮ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಕೆ.ಅನಂತರೆಡ್ಡಿ, ಖಜಾಂಚಿ ಜಿ.ವೈ.ಸುರೇಶ್‌ಕುಮಾರ್ ಹಾಗೂ ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ವ್ಯಾಪ್ತಿಯನ್ನು ಒಳಗೊಂಡಿರುವ ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯರು, ಸಂಘದ ತಾಲೂಕು ಘಟಕಗಳ ಅಧ್ಯಕ್ಷರು ಇದ್ದರು.
ನೈಟಿಂಗೇಲ್ ಪ್ರಶಸ್ತಿಗೆ ಭಾಜನರಾದ ಹೊನ್ನಾಳಿ ತಾಲೂಕು ಬಾಗತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ನಾಗರತ್ನಾ, 45 ಮಾಜಿ ಸೈನಿಕರು, 42 ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.
110 ಎಸ್ಸೆಸ್ಸೆಲ್ಸಿ ಹಾಗೂ 170 ಸೆಕೆಂಡ್ ಪಿಯುಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ರಾಜ್ಯಸಭಾ ಸದಸ್ಯರಾಗಲಿ
ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವಂತೆ ಸಮುದಾಯದವರೆಲ್ಲರೂ ಪಕ್ಷಾತೀತವಾಗಿ ಬಿಜೆಪಿ ವರಿಷ್ಠರ ಮೇಲೆ ಒತ್ತಡ ತರಬೇಕಿದೆ.
ಮೆ.ಕಾ.ಮುರಳಿಕೃಷ್ಣ, ನಿರ್ದೇಶಕ ರೆಡ್ಡಿ ಜನಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net