

ಹಾಸನ: ರಾಜ್ಯ ಸೇರಿದಂತೆ ಇಡೀ ದೇಶಕ್ಕೆ ಮೋದಿ ಅವರೇ ಗ್ಯಾರಂಟಿ. ಈ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಕೂಡ ಎನ್‌ಡಿಎ ಮೈತ್ರಿಕೂಟ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ ಎಂದು ಕೇಂದ್ರದ ವಿದ್ಯುತ್ ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ವಿಶ್ವಾಸ ವ್ಯಕ್ತಪಡಿಸಿದ್ದರು.
ನಗರದ ಕೆ.ಆರ್ ಪುರಂನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೇವಲ ಮೋದಿ ಗ್ಯಾರಂಟಿ ನಡೆಯುತ್ತಿದೆ. ಇವರ ಗ್ಯಾರಂಟಿ ಬಿಟ್ಟರೆ ಇನ್ಯಾವ ಗ್ಯಾರಂಟಿ ಕೂಡ ನಡೆಯುವುದಿಲ್ಲ. ಕರ್ನಾಟಕದಲ್ಲಿ 28 ಸ್ಥಾನವನ್ನು ಗೆಲ್ಲಲು ಈಗಾಗಲೇ ಟಾರ್ಗೆಟ್ ಮಾಡಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸಿದರು.
ಬಿಜೆಪಿಯಲ್ಲಿ ಮೋದಿ ಬಣ ಒಂದೇ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ್ ಆಕ್ರೋಶ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಇರುವುದು ಒಂದೇ ಬಣ ಅದು ಮೋದಿ ಬಣ. ನಮ್ಮದು ಭಾರತೀಯ ಜನತಾ ಪಾರ್ಟಿ. ನಮ್ಮಲ್ಲಿ ನಾಯಕರು ಒಂದೇ, ಕಾರ್ಯಕರ್ತರು ಒಂದೇ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಣ್ಣ-ಪುಟ್ಟ ಸಮಸ್ಯೆಗಳಿದ್ದು, ಅದನ್ನು ಪಕ್ಷದ ವೇದಿಕೆಯಲ್ಲಿ ಹೈಕಮಾಂಡ್ ಬಗೆಹರಿಸಲಿದೆ ಎಂದು ಹೇಳಿದರು.
ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಘೋಷಣೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಪಕ್ಷದ ಜತೆ ಒಪ್ಪಂದ ಮಾಡಿಕೊಳ್ಳಬೇಕು. ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆದ್ದರಿಂದ ಈ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಈವರೆಗೂ ಒಳ್ಳೆಯದೇ ಆಗಿದೆ ಹೊರತು ಕೆಟ್ಟದಾಗಿಲ್ಲ. ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಜತೆ ಯಾವ ಪಕ್ಷದವರೂ ಕೂಡ ಸೇರುತ್ತಿಲ್ಲ ಅವರು ಏಕಾಂಗಿಯಾಗುತ್ತಿದ್ದಾರೆ. ಮೋದಿಯವರನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಸಮಯ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ರಾಜ್ಯ ಮತ್ತು ದೇಶಕ್ಕೆ ಅನುಕೂಲವಾಗಲಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಫಲಿತಾಂಶ ಕರ್ನಾಟಕದಲ್ಲೂ ಮರುಕಳಿಸಲಿದೆ. ಹರಿಯಾಣದಲ್ಲಿ 28 ಸೀಟುಗಳನ್ನು ಗೆದ್ದಂತೆ ಕರ್ನಾಟಕದಲ್ಲೂ ಕೂಡ 28 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ನಿಷ್ಪಕ್ಷಪಾತ ತನಿಖೆಗೆ ಸ್ಪೀಕರ್ ಆದೇಶ:
ಸಂಸತ್ ಕಲಾಪಕ್ಕೆ ನುಗ್ಗಿದ ಯುವಕರು ಕ್ಯಾನಿಸ್ಟರ್ (ಬಣ್ಣ ತುಂಬಿದ ತಗಡಿನ ಸಣ್ಣ ಡಬ್ಬಿ) ಹಿಡಿದು ಓಡಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ. ದೇಶದಲ್ಲಿ ಇಂತಹ ಘಟನೆಗಳು ನಡೆಯಬಾರದು. ಈ ರೀತಿ ಘಟನೆಬ ನಡೆದಿರುವುದು ಇದು ಮೊದಲಲ್ಲ. ಯುವಕರು ಯಾವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತನಿಖೆಯ ನಂತರ ಹೊರಬರಲಿದೆ. ಆದರೆ, ಇದರಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು ಎಂದು ಸಚಿವರು ಹೇಳಿದರು.
ಇದು ದೇಶದ ಭದ್ರತೆಯ ವಿಷಯವಾಗಿರುವುದರಿಂದ ಲೋಕಸಭಾ ಸ್ಪೀಕರ್ ಅವರು ಜನರಿಗೆ ಒಂದು ಆಶ್ವಾಸನೆ ಕೊಟ್ಟಿದ್ದಾರೆ. ಈ ಘಟನೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭದ್ರತೆಯನ್ನು ಹೆಚ್ಚಿಸಲಿದ್ದು, ಈ ಬಗ್ಗೆ ಒಂದು ಕಮಿಟಿಯನ್ನು ಸ್ಪೀಕರ್ ರಚಿಸಿದ್ದಾರೆ. ಆ ಸಮಿತಿಯು 15ರಿಂದ 20 ದಿನಗಳ ಒಳಗೆ ವರದಿ ನೀಡಲಿದ್ದು, ಇದರಲ್ಲಿ ಎಲ್ಲಿ ಲೋಪ-ದೋಷಗಳಾಗಿವೆ ಮತ್ತು ಇನ್ನಿತರೆ ಅಂಶಗಳ ಆಧಾರದ ಮೇಲೆ ಭದ್ರತೆಯನ್ನು ಹೆಚ್ಚಿಸುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಎಚ್.ಕೆ. ಸುರೇಶ್, ಸಕಲೇಶಪುರದ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಮಾಜಿ ಸಚಿವ ವಿಜಯಶಂಕರ್, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ವಿಜಿ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.