

ಚಾಮರಾಜನಗರ: ಕಗ್ಗತ್ತಲಿನಲ್ಲಿದ್ದ ದೇಶದ ಶೋಷಿತ ಸಮುದಾಯಗಳ ಜನರಿಗೆ ಜ್ಯೋತಿ ಬಾಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ದಂಪತಿಗಳು ಬೆಳಕನ್ನು ನೀಡಿದರು ಎಂದು ಬೋಗಾಪುರ ವಸತಿಯುಕ್ತ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನ ಬಳಿ ಇರುವ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾತೆ ಸಾವಿತ್ರಿಬಾಯಿ ಫುಲೆ ರವರ 194ನೇ ಜಯಂತಿ ಮತ್ತು ಭೀಮ ಕೋರೆ ಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಹಲವಾರು ಮಹನೀಯರು ನೀಡಿದ ಕೊಡುಗೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಭಾರತದ ಪ್ರಜಾಪ್ರಭುತ್ವ ವಿಶ್ವದ ತಾಯಿ ಇದ್ದಂತೆ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ಸುಮಾರು ೨೦೦೦ ವರ್ಷಗಳ ವರೆಗೆ ಕಗ್ಗತ್ತಲಿನಲ್ಲಿ ಇದ್ದ ದೇಶಕ್ಕೆ ಮಹಾತ್ಮ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ದಂಪತಿಗಳು ಬೆಳಕನ್ನು ನೀಡಿದರು. ೧೮ ನೇ ಶತಮಾನದಲ್ಲಿ ಸಾಮಾಜಿಕ ವ್ಯವಸ್ಥೆ ಅತ್ಯಂತ ಧಾರುಣ ಸ್ಥಿತಿಯಲ್ಲಿತ್ತು. ಅಂತಹ ಪರಿಸ್ಥಿತಿಯಲ್ಲೂ ಮಹಿಳೆಯರಿಗೆ ಶಾಲೆಗಳನ್ನು ತೆರೆಯುವ ಮೂಲಕ ಕೊಟ್ಯಾಂತರ ಜನರಿಗೆ ನೆರವಾಗಿದ್ದಾರೆ ಎಂದರು.
ಕೋರೆಗಾಂವ್ ವಿಜಯೋತ್ಸವವನ್ನು ಮೂಲ ನಿವಾಸಿಗಳ ಸ್ವಾಭಿಮಾನದ ವಿಜಯೋತ್ಸವ ಎಂದು ಜಗತ್ತಿನಾದ್ಯಂತ ಆಚರಣೆ ಮಾಡಲಾಗುತ್ತಿದೆ. ಈ ದೇಶದ ಇತಿಹಾಸವನ್ನು ಬರೆದ ಇತಿಹಾಸಕಾರರು ಮಾನವೀಯತೆಯನ್ನೇ ಮರೆ ಮಾಡಿದ್ದರು. ಈ ಶೋಷಿತರ ಚರಿತ್ರೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೆಕ್ಕಿ ತೆಗೆದರು. ಈ ನಿಟ್ಟಿನಲ್ಲಿ ಬಹುಜನ ಸಮಾಜದ ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಾಗಬೇಕಿದೆ ಎಂದು ಹೇಳಿದರು.
ಕೆಪಿಟಿಸಿಎಲ್ ಕಿರಿಯ ಅಭಿಯಂತರ ಎಸ್.ಸಿದ್ದರಾಜಪ್ಪ, ಬೋಗಾಪುರ ವಸತಿಯುಕ್ತ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಸಿಮ್ಸ್ ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ಮಾರುತಿ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮ ಶೆಟ್ಟಿ, ಮೈಸೂರು ಕೆಎಸ್ಆರ್ಟಿಸಿ ಕಾರ್ಮಿಕ ಕಲ್ಯಾಣಾಧಿಕಾರಿ ರಶ್ಮಿ, ಡಾ.ಪ್ರಕಾಶ್, ಮುಖಂಡ ಮಹೇಶ್ ಕುದರ್, ವಕೀಲ ಪುಟ್ಟಸ್ವಾಮಿ ರಾಮಸಮುದ್ರ, ಮಲ್ಲಿಕ್ ಯಲಕ್ಕೂರು, ಬ.ಮ.ಕೃಷ್ಣಮೂರ್ತಿ, ಎಂ.ಶಿವಣ್ಣ, ನಟರಾಜ್, ಕೆ.ಎಂ.ಮಹೇಶ್, ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.