ದೇಶಕ್ಕೆ ಗಾಂಧಿ-ಶಾಸ್ತ್ರಿ ಕೊಡುಗೆ ಅಪಾರ

Charaka
Published on

ಚಿತ್ರದುರ್ಗ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರಪಿತ ಮಹಾತ್ಮಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಮಹನೀಯರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ನಗರಸಭೆ, ವಾರ್ತಾ ಸೇರಿ ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಗಾಂಧಿ, ಶಾಸ್ತ್ರಿ ಅವರ ತತ್ವಾದರ್ಶ ಒಂದೇ ರೀತಿಯಾಗಿದ್ದು, ಸತ್ಯ, ಅಹಿಂಸೆ, ತ್ಯಾಗ, ಬಲಿದಾನ ಮತ್ತು ಸರಳತೆಯ ಪ್ರತೀಕವಾಗಿದ್ದಾರೆ. ಮಹನೀಯರ ಮೌಲ್ಯ ಅಳವಡಿಸಿಕೊಂಡು ದೇಶ ಮತ್ತು ಸಮಾಜಕ್ಕೆ ಕೊಡುಗೆ ನೀಡಿ ಎಂದು ಯುವಸಮೂಹಕ್ಕೆ ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಹುರುಳಿ ಎಂ.ಬಸವರಾಜ್ ಮಾತನಾಡಿ, ಗಾಂಧಿ ಅವರು ಸಮಾಜದ ಅಂಕುಡೊಂಕುಗಳು, ಬ್ರಿಟಿಷರ ದಬ್ಬಾಳಿಕೆ, ಉಳ್ಳವರ ಕಿರುಕುಳ ತಪ್ಪಿಸಿ, ಸಮಸಮಾಜ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಅದೇ ರೀತಿ ಶಾಸ್ತ್ರಿಯವರ ಚಿಂತನೆಗಳು ಸರ್ವಕಾಲಿಕವಾಗಿವೆ. ಇಂತಹ ಮಹಾನ್ ಚೇತನರ ಕುರಿತು ತಿಳಿದು ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ವೇಳೆ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ, ಜಿಲ್ಲಾ ಆಯುಷ್ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆಯುಷ್ ಕಿಟ್, ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಅಂಗವಾಗಿ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ ಅಭಿಯಾನದ 8 ವಿಭಾಗಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಚಿತ್ರದುರ್ಗ ನಗರಸಭೆಗೆ 7 ಪ್ರಶಸ್ತಿ ವಿತರಿಸಲಾಯಿತು.

ಸ್ವಚ್ಛತಾ ನಡಿಗೆ: ಸಭಾ ಕಾರ್ಯಕ್ರಮಕ್ಕೂ ಮುನ್ನ ಮಹನೀಯರ ಜಯಂತಿ ಅಂಗವಾಗಿ ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಡಿಸಿ ಕಚೇರಿವರೆಗೂ ನಡೆದ ಸ್ವಚ್ಛತಾ ನಡಿಗೆಗೆ ಡಿ.ಸುಧಾಕರ್ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಸುಮಿತಾ ಸೇರಿ ಅಧಿಕಾರಿಗಳು ಪಾಲ್ಗೊಂಡಿದ್ದರು. ನಂತರ ಸ್ವಚ್ಛತಾ ಶ್ರಮದಾನ ನಡೆಯಿತು.

ಕೂಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕೆಡಿಪಿ ಸದಸ್ಯ ನಾಗರಾಜು, ಡಿಸಿ ವೆಂಕಟೇಶ್, ಜಿಪಂ ಸಿಇಒ ಸೋಮಶೇಖರ್, ಎಡಿಸಿ ಕುಮಾರಸ್ವಾಮಿ, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಎಸಿ ಕಾರ್ತಿಕ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ತಹಸೀಲ್ದಾರ್ ಡಾ.ನಾಗವೇಣಿ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net