

ನರಗುಂದ: ದೇಶ ನನಗೇನು ಕೊಟ್ಟಿದೆ ಎಂಬುವುದಕ್ಕಿಂತ ದೇಶಕ್ಕಾಗಿ ನಾನೇನು ಕೊಡುಗೆ ನೀಡಬೇಕಾಗಿದೆ ಎಂಬುದನ್ನು ಇಂದಿನ ಯುವ ಜನಾಂಗ ಯೋಚಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನರಗುಂದ ಪಟ್ಟಣದ ಶ್ರೀ ಸಿದ್ಧೇಶ್ವರ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದ 5 ಲಕ್ಷ ರೂ.ದಲ್ಲಿ ನಿರ್ವಿುಸಿದ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆ, ರುಸಾ ಯೋಜನೆಯ 67 ಲಕ್ಷ ರೂ. ದಲ್ಲಿ ನೂತನ ವಿದ್ಯಾರ್ಥಿಗಳ ವಸತಿ ನಿಲಯ ನಿರ್ವಣದ ಭೂಮಿ ಪೂಜೆ, ಕಾಲೇಜ್ನ ಬಿಎ ಪ್ರಥಮ ವರ್ಷದ 485 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ನಾನು ಶಾಸಕನಾದ ಬಳಿಕ ನರಗುಂದ ಕಾಲೇಜ್ಗೆ ಆಡಿಟೋರಿಯಂ ನಿರ್ವಣಕ್ಕೆ 8 ಕೋಟಿ ರೂ., ಹಳೆಯ ಕಟ್ಟಡ ಉನ್ನತೀಕರಣಕ್ಕಾಗಿ 72 ಲಕ್ಷ ರೂ., ಪ್ರಯೋಗಾಲಯಕ್ಕೆ 3.40 ಕೋಟಿ ರೂ., ಪಿ.ಜಿ. ಕಟ್ಟಡ ನಿರ್ವಣಕ್ಕೆ 2 ಕೋಟಿ ರೂ. ಸೇರಿ ಒಟ್ಟು 13 ಕೋಟಿ ರೂ. ಅನುದಾನ ತಂದಿದ್ದೇನೆ. ಇಂದಿನ ಕೆಲ ಯುವಕರು ದೇಶ ವಿರೋಧಿ ಘೊಷಣೆ ಕೂಗುವುದು ಮತ್ತು ಹೇಳಿಕೆಗಳನ್ನು ಕೊಡುತ್ತಿರುವುದು ವಿಷಾದಕರ ಸಂಗತಿ. ದೇಶ ವಿರೋಧಿ ಹೇಳಿಕೆ ನೀಡುವವರ ಮಟ್ಟ ಹಾಕಲು ವಿದ್ಯಾರ್ಥಿಗಳು ಪರಿವರ್ತನೆ ಆಗಬೇಕಾಗಿದೆ ಎಂದರು. ಜಿಪಂ ಸದಸ್ಯೆ ರೇಣುಕಾ ಅವರಾದಿ, ಭಾವನ ಪಾಟೀಲ, ನಿಂಗಪ್ಪ ನಾಗನೂರ, ಸುನೀಲ ಶೆಲ್ಲಿಕೇರಿ, ಪಿ.ಎಸ್. ಅಣ್ಣಿಗೇರಿ, ಎನ್.ವಿ. ಮೇಟಿ, ಉಮೇಶಗೌಡ ಪಾಟೀಲ, ಸುರೇಶ ಸವದತ್ತಿ, ಎ.ಬಿ. ವಗ್ಗರ, ವಿನಾಯಕ, ಡಾ. ಎಂ.ಡಿ. ಕಮತಗಿ, ಇತರರಿದ್ದರು.<