

ಚಾಮರಾಜನಗರ: ಸಮಾಜದಲ್ಲಿ ಮಹಿಳೆಯರನ್ನು ಸಂಕೋಲೆಗಳಿಂದ ಬಿಡುಗಡೆಗೊಳಿಸಿ, ಅವರಿಗೆ ಸಮಾನತೆಯ ಸಂವಿಧಾನಾತ್ಮಕವಾಗಿ ದೊರಕಿಸಿಕೊಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಅಪಾರವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ತಿಳಿಸಿದರು.
ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಎಆರ್‌ಎಸ್ ಟ್ರಸ್ಟ್ ಮತ್ತು ಕಾವೇರಿ ಡೆಂಟಲ್ ಕ್ಲಿನಿಕ್ ಸಹಯೋಗದಲ್ಲಿ ಶನಿವಾರ ನಡೆದ ಅಂತರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12 ನೇ ಶತಮಾನದ ವಿಷಮ ಪರಿಸ್ಥಿತಿಯಲ್ಲಿ ಜಾತ್ಯಾತೀತ ಸಮಾಜ ನಿರ್ಮಾಣ, ಮಹಿಳೆಯರಿಗೆ ಸಮಾನತೆ ನೀಡಿ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ ವ್ಯಕ್ತಿ ಬಸವಣ್ಣನವರು. 21 ನೇ ಶತಮಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಿಳೆಯರಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಿದ್ದಾರೆ. ಇದರ ಫಲವಾಗಿ ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಸಮಾಜದ ಪ್ರತಿಯೊಬ್ಬರೂ ಈ ಇಬ್ಬರು ಮಹಾ ಪುರುಷರ ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತಾನಾಡಿ, ಮಹಿಳೆ ಇಲ್ಲದೆ ಯಾವುದೇ ಸಮಾಜವು ಪ್ರಗತಿ ಹೊಂದಲು ಸಾಧ್ಯವಿಲ್ಲ. ಮಹಿಳೆಯರು ಕುಟುಂಬ ಮತ್ತು ಸಮಾಜವನ್ನು ಪೋಷಿಸುವ ಜವಾಬ್ದಾರಿ ಮಾತ್ರವಲ್ಲದೆ ನಾಯಕತ್ವ ಮತ್ತು ಪ್ರಗತಿಯ ಅಡಿಪಾಯವೂ ಆಗಿದ್ದಾಳೆ ಎಂದರು.
ಪೂರ್ವ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ನವೀನ್ ಮಾತನಾಡಿ, ಮಹಿಳೆ ಪುರುಷರಿಗಿಂತ ಕಡಿಮೆ ಅಲ್ಲ. ಅವರಿಗೆ ಸರಿಸಮಾನವಾಗಿ ಬೆಳೆದಿದ್ದಾಳೆ. ಹೆಣ್ಣು ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗದೆ ಧೈರ್ಯದಿಂದ ಬದುಕಬೇಕು. ಪ್ರಪಂಚದಲ್ಲಿ ಹೆಣ್ಣಿಗೆ ಶ್ರೇಷ್ಠವಾದ ಸ್ಥಾನವಿದೆ ಎಂದರು.
ವಕೀಲರ ಆರ್.ಅರುಣ್‌ಕುಮಾರ್ ಮಾತನಾಡಿ, ಸಮಾಜದ ಹಿತ ದೃಷ್ಟಿಯಿಂದ ಸಾಮಾಜಿಕ ಸಮಸ್ಯೆ ಗುರುತಿಸಿ ಎಆರ್‌ಎಸ್ ಟ್ರಸ್ಟ್ ವತಿಯಿಂದ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತಿದೆ ಎಂದರು. ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸದ್ದ ಆಟೋಟ ಸ್ವರ್ಧೆಗಳು ಮತ್ತು ಸಾಂಸ್ಕೃತಿಕ ಸ್ವರ್ಧೆಗಳ ವಿಜೇತರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಆರ್‌ಎಸ್ ಅಧ್ಯಕ್ಷ ಡಾ.ಕೃಪಾಶಂಕರ್, ಗೌರವಾಧ್ಯಕ್ಷೆ ಯಶೋಧಮ್ಮ ರಂಗಸ್ವಾಮಿ, ಜಾನಪದ ಗಾಯಕ ಜ.ಸುರೇಶ್‌ನಾಗ್, ಅಶೋಕ್, ರಾಜಣ್ಣ, ವಕೀಲೆ ಮೌನಶ್ರೀ ಇತರರು ಹಾಜರಿದ್ದರು.