ದೇಶಕ್ಕಾಗಿ ಸೇವೆ ಸಲ್ಲಿಸುವವರನ್ನು ಗೌರವಿಸಬೇಕು

Those who serve the country should be respected
ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕುಂಟೋಜಿ ಹಿರೇಮಠದ ಚನ್ನವೀರ ದೇವರು ಚಾಲನೆ ನೀಡಿದರು. ಪಲ್ಲವಿ ನಾಡಗೌಡ, ಎಸ್.ಎಸ್. ಹುಲ್ಲೂರ, ಶಾಂತಗೌಡ ಪಾಟೀಲ ನಡಹಳ್ಳಿ, ಸಿ.ಬಿ. ಅಸ್ಕಿ, ಸಂಗಯ್ಯ ಹಾಲಗಂಗಾಧರಮಠ ಇತರರಿದ್ದರು.
Published on

ಮುದ್ದೇಬಿಹಾಳ: ದೇಶ ಪ್ರೇಮವೆಂದರೆ ಕೇವಲ ಬಾಯಿ ಮಾತುಗಳಲ್ಲಿ ಹೇಳುವುದಲ್ಲ. ಜೀವ ಒತ್ತೆ ಇಟ್ಟು ಹೋರಾಡಬೇಕು. ದೇಶಕ್ಕಾಗಿ ಸೇವೆ ಸಲ್ಲಿಸುವವರನ್ನು ಪ್ರೋತ್ಸಾಹಿಸಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠ ಡಾ. ಚನ್ನವೀರ ದೇವರು ಹೇಳಿದರು.

ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ, ಸ್ವಾತಂತ್ರೊೃೀತ್ಸವ, ನನ್ನ ಮಣ್ಣು-ನನ್ನ ದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಯುದ್ಧದಲ್ಲಿ ಹುತಾತ್ಮರಾಗುವ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಸಮಾಜ ಬೆಳೆಸಿಕೊಳ್ಳಬೇಕು ಎಂದರು.

ಡಿಎಸ್ ಫೌಂಡೇಷನ್ ಅಧ್ಯಕ್ಷೆ ಪಲ್ಲವಿ ನಾಡಗೌಡ ಮಾತನಾಡಿ, ದೇಶಕ್ಕಾಗಿ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿಭಾಯಿಸುವ ಸೈನಿಕರ ಕುಟುಂಬ ಹೇಗಿರುತ್ತೆ ಅನ್ನೋದು ಗೊತ್ತಿರಬೇಕು. ಅಂಥ ಸೈನಿಕರ ಕುಟುಂಬಗಳಿಗೆ ನಾವು ನಮಿಸಬೇಕು. ರೈತರಿಗೆ ಮತ್ತು ಸೈನಿಕರಿಗೆ ವಿಶ್ರಾಂತಿ ಇರುವುದಿಲ್ಲ. ಸೈನಿಕರ ಸೇವೆ ಎಲ್ಲ ಸೇವೆಗಿಂತ ದೊಡ್ಡದು. ಭೂಮಿಗೋಸ್ಕರ ಜಗಳ ಮಾಡುವ ಈ ದಿನಗಳಲ್ಲಿ ಸೈನಿಕರಿಂದ ಕಲಿಯುವುದು ಸಾಕಷ್ಟಿದೆ ಎಂದರು.
ನಿವೃತ್ತ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ, ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ. ಅಸ್ಕಿ, ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಹಾಲಗಂಗಾಧರಮಠ, ಶಾಂತಗೌಡ ಪಾಟೀಲ ನಡಹಳ್ಳಿ, ಬಸವರಾಜ ಪೂಜಾರಿ ಮಾತನಾಡಿದರು.

ಕಾರ್ಗಿಲ್ ಸ್ಮಾರಕ ನಿರ್ಮಾಣ ಸಮಿತಿ ಅಧ್ಯಕ್ಷ ಮಹಾಂತೇಶ ಬೂದಿಹಾಳಮಠ, ಎಂಜಿವಿಸಿ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಅಶೋಕ ತಡಸದ, ನದಾಫ ಸಂಘದ ಅಧ್ಯಕ್ಷ ಎಂ.ಡಿ. ನದಾಫ, ಕಾರ್ಗಿಲ್ ಹುತಾತ್ಮ ದಾವಲಸಾಬ ಕಂಬಾರ ಅವರ ಸಹೋದರ ನಬೀಸಾ ಕಂಬಾರ, ಶಿವಶಂಕರಗೌಡ ಹಿರೇಗೌಡರ, ಶಂಕ್ರಪ್ಪ ಹೂಗಾರ, ಸಿದ್ದಲಿಂಗಯ್ಯ ಕಲ್ಯಾಣಮಠ, ಅರವಿಂದ ಕೊಪ್ಪ, ಹುಲಗಪ್ಪ ನಾಯಕಮಕ್ಕಳ, ಮಾಜಿ ಸೈನಿಕರಾದ ರಂಗನಾಥ ಆಲೂರ, ಬಿ.ಆರ್. ಚೌಡಕೇರ, ಈರಣ್ಣ ಕುಂಬಾರ, ಎಂಜಿವಿಸಿ ಕಾಲೇಜು ಪ್ರಾಂಶುಪಾಲ ಎನ್.ಎಸ್. ಪೋಲೇಶಿ, ಪಪೂ ಕಾಲೇಜಿನ ಪ್ರಾಚಾರ್ಯ ಐ.ಎ. ತಳವಾರ, ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥ ಪ್ರೊ. ಎಸ್.ಎಸ್. ಹೂಗಾರ, ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ ಕೋನರಡ್ಡಿ, ಎನ್‌ಸಿಸಿ ಮುಖ್ಯಸ್ಥ ಎಸ್.ಜಿ. ಪಾಟೀಲ, ಎನ್‌ಎಸ್‌ಎಸ್ ಮುಖ್ಯಸ್ಥ ಎಂ.ಐ. ಬಿರಾದಾರ ಇದ್ದರು.

1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದ 91ರ ವಯೋಮಾನದ ಈರಣ್ಣ ಕುಂಬಾರ ಮತ್ತು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ಅಂಗವೈಕಲ್ಯಕ್ಕೆ ಒಳಗಾಗಿರುವ ರಂಗನಾಥ ಆಲೂರ ಅವರನ್ನು ಸನ್ಮಾನಿಸಲಾಯಿತು.

ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ರಚಿಸಿ ನಿರ್ದೇಶಿಸಿದ ನವಭಾರತ ವೈಭವ ನಾಟಕದಲ್ಲಿನ ಸನ್ನಿವೇಶವೊಂದರ ಹುತಾತ್ಮ ಸೈನಿಕರ ಜೀವನ, ದೇಶಾಭಿಮಾನದ ಏಕಪಾತ್ರಾಭಿನಯ ಮಾಡಿದರು. ಸ್ವಾತಿ ಮಠದ ಭರತನಾಟ್ಯ ಪ್ರದರ್ಶಿಸಿದರು. ಸಂಘದ ಅಧ್ಯಕ್ಷ ಆರ್.ಐ.ಹಿರೇಮಠ ಅವರಿಗೆ ಎಂಜಿವಿಸಿ ಕಾಲೇಜು ವತಿಯಿಂದ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಸಂಗಮೇಶ ಶಿವಣಗಿ, ದೀಪಾ ರತ್ನಶ್ರೀ ಪ್ರಾರ್ಥಿಸಿ ರಾಷ್ಟ್ರಗೀತೆ ಹಾಡಿದರು. ಆರ್.ಐ. ಹಿರೇಮಠ ನಿರ್ವಹಿಸಿದರು.

ಗಮನ ಸೆಳೆದ ತಿರಂಗಾ ಜಾಥಾ
ಕಾರ್ಯಕ್ರಮಕ್ಕೂ ಮುನ್ನ ತಿರಂಗಾ ಜಾಥಾಕ್ಕೆ ವಿಬಿಸಿ ಪ್ರೌಢಶಾಲೆಯಲ್ಲಿ ಪಲ್ಲವಿ ನಾಡಗೌಡ, ಪ್ರತಿಭಾ ಅಂಗಡಗೇರಿ, ಶಾಂತಗೌಡ ಪಾಟೀಲ ಚಾಲನೆ ನೀಡಿದರು. ಅಂದಾಜು 2 ಕಿಮೀ.ವರೆಗೆ ನಡೆದ 5-6 ಕಾಲೇಜುಗಳ ಅಂದಾಜು 50 ಮೀಟರ್ ಉದ್ದದ ತಿರಂಗಾ ಧ್ವಜದ ಮೆರವಣಿಗೆ ಮತ್ತು ಪಾಕಿಸ್ತಾನ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ನಿವೃತ್ತ ಸೈನಿಕರನ್ನು ತೆರೆದ ವಾಹನದಲ್ಲಿ ಕಾರ್ಯಕ್ರಮಕ್ಕೆ ಕರೆ ತಂದದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net