

ಶೃಂಗೇರಿ: ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವ ಕಿಚ್ಚು ನಮ್ಮಲ್ಲಿ ಹೊರಹೊಮ್ಮಬೇಕಿದೆ ಎಂದು ವಿಹಿಂಪ ಮುಖಂಡ ದಿವೀರ್ ಮಲ್ನಾಡು ತಿಳಿಸಿದರು.
ಕುರುಬಕೇರಿ ಸರ್ಕಲ್ ಸಮೀಪ ತಾಲೂಕು ಬಿಜೆಪಿ ಮಂಡಲ, ವಿಹಿಂಪ, ತಾಲೂಕು ಬಜರಂಗದಳದಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಹಿಂದು ಧರ್ಮದವರ ರಕ್ತ ನಿರಂತರವಾಗಿ ನೆಲದಲ್ಲಿ ಹರಿಯುತ್ತಿದೆ. ಈ ಸಂದರ್ಭದಲ್ಲಿ ಸರ್ವರೂ ಒಗ್ಗೂಡಿ ಹೇಯ ಕೃತ್ಯದ ವಿರುದ್ಧ ಹೋರಾಟದ ಸಂಕಲ್ಪಕ್ಕೆ ಕೈಜೋಡಿಸಬೇಕಿದೆ. ಜಾತ್ಯಾತೀತ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ದೇಶದಲ್ಲಿ ಮಾನವೀಯ ಮೌಲ್ಯ ಬರಿದಾಗಿದೆ. ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷದವರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಸಂಘಟನೆಗಳ ಅಟ್ಟಹಾಸ ಮಿತಿ ಮೀರಲಿದೆ. ಹಿಂದುಗಳು ಒಂದಾಗಬೇಕು. ನಮ್ಮಲ್ಲಿ ಕ್ಷಾತ್ರ ತೇಜಸ್ಸು ಇದೆ ಎಂಬುದನ್ನು ಪಾಕಿಸ್ತಾನದವರಿಗೆ ತೋರಿಸಬೇಕು. ಪಾಕಿಸ್ತಾನದ ಭೂಪಟ ಜಗತ್ತಿನಲ್ಲಿ ಇರಬಾರದು. ಆಗ ಮಾತ್ರ ಭಯೋತ್ಪಾದನೆ ಸರ್ವನಾಶವಾಗಲು ಸಾಧ್ಯ ಎಂದರು.
ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವೇಣುಗೋಪಾಲ್ ಮಾತನಾಡಿ, ಸನಾತನ ಧರ್ಮದಲ್ಲಿ ಸಂಸ್ಕೃತಿ ಇದೆ. ಸನಾತನ ಧರ್ಮದ ಸರ್ವರೂ ಒಗ್ಗೂಡಿದಾಗ ಮಾತ್ರ ಉಗ್ರರ ಅಟ್ಟಹಾಸ ಕಡಿಮೆಯಾಗಲು ಸಾಧ್ಯ. ಭರತಖಂಡದಲ್ಲಿ ಹಿಂದು ಸಂಸ್ಕೃತಿ ಉಳಿಸಲು ಮಹಾಪುರುಷರು ಹೋರಾಟ ಮಾಡಿದ್ದರು. ಅವರನ್ನು ಆದರ್ಶವಾಗಿ ಇರಿಸಿಕೊಂಡು ಮುನ್ನಡೆಯಬೇಕಿದೆ. ಉಗ್ರ ಸಂಘಟನೆಯ ವಿರುದ್ಧ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವೆಲ್ಲರೂ ನೈತಿಕ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಎಚ್.ಕೆ.ನೂತನ್‌ಕುಮಾರ್, ಪಪಂ ಸದಸ್ಯರಾದ ಹರೀಶ್ ವಿ. ಶೆಟ್ಟಿ, ರಾಧಿಕಾ ಜಯಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಜಿ.ಎಂ.ಸತೀಶ್, ಕೆ.ಎಸ್.ರಮೇಶ್, ಸುಮಂಗಲಿ ಇದ್ದರು.