

ಚಿತ್ರದುರ್ಗ: ದೇಶದ ಅಭಿವೃದ್ಧಿ, ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ ಎಂದು ಹೊಳಲ್ಕೆರೆಯ ಡಾ.ಜಯಸಿಂಹ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಪ್ರಧಾನಿಯಾದರೆ ಮಾತ್ರ ಭಾರತ ವಿಶ್ವಮಟ್ಟದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಹೋಗಲು ಸಾಧ್ಯ. ಹೀಗಾಗಿ ಅವರ ಅಗತ್ಯ ತುಂಬಾ ಇದೆ ಎಂದರು.
ದೇಶಕ್ಕಾಗಿಯೇ ಮೋದಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಹಗಲಿರುಳು ಶ್ರಮಿಸುತ್ತಿದ್ದಾರೆ. ಕಳೆದ 10 ವರ್ಷದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರಾಷ್ಟ್ರದ ಚಿತ್ರಣವೂ ಬದಲಾಗುತ್ತಿದೆ. ಅವರ ಕಾರ್ಯವೈಖರಿ ಜನತೆಗೆ ತಿಳಿಸುವ ಮೂಲಕ ಮತಯಾಚಿಸಲಾಗುವುದು ಎಂದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಚುನಾವಣೆಯಲ್ಲಿ ನಾನೂ ಬಿಜೆಪಿ ಆಕಾಂಕ್ಷಿಯಾಗಿದ್ದೆ. ಆದರೆ, ಟಿಕೆಟ್ ಸಿಗಲಿಲ್ಲ. ಬೆಂಬಲಿಗರ ಒತ್ತಾಯದ ಮೇರೆಗೆ ಪಕ್ಷೇತರನಾಗಿ ಸ್ಪರ್ಧಿಸಿ, 20 ಸಾವಿರ ಮತ ಪಡೆದಿದ್ದೇನೆ. ಈಗ ಮೋದಿಗಾಗಿ ಕೆಲಸ ಮಾಡುವ ಅವಕಾಶ ದೊರೆತಿದೆ ಎಂದು ಹೇಳಿದರು.
ಜಿಲ್ಲಾ ಬಂಜಾರ ಲಂಬಾಣಿ ಸಂಘದ ಅಧ್ಯಕ್ಷ ಎಂ.ಸತೀಶ್‌ಕುಮಾರ್ ಮಾತನಾಡಿ, ರಾಜ್ಯದ ಒಂದು ಕ್ಷೇತ್ರದಲ್ಲೂ ಲೋಕಸಭೆಗೆ ಸ್ಪರ್ಧಿಸಲು ನಮ್ಮವರಿಗೆ ಟಿಕೆಟ್ ನೀಡಿಲ್ಲ. ಸಂಪುಟದಲ್ಲೂ ಆದ್ಯತೆ ನೀಡಿಲ್ಲ. ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಏನು. ಇದನ್ನು ಮನಗಂಡು ಯೋಚಿಸಿ ಮತ ಚಲಾಯಿಸಿ ಎಂದು ಸಮಾಜದವರಿಗೆ ಮನವಿ ಮಾಡಿದರು.
ಮುಖಂಡರಾದ ಗಿರೀಶ್, ವೀರೇಶ್, ಪ್ರವೀಣ್, ರಮೇಶ್ ನಾಯ್ಕ, ಪರಮೇಶ್ವರ ನಾಯ್ಕ ಇತರರಿದ್ದರು.