ದೇಶಕ್ಕಾಗಿ ತೃಪ್ತಿ-ಮಾನವತೆ ಬೆಳೆಸಿಕೊಳ್ಳಿ - ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಶಯ - ‘ಧರ್ಮ ಪ್ರಕಾಶಕ್ಕೊಂದು ಕಿರಣ’ ಪುಸ್ತಕ ಬಿಡುಗಡೆ

dvg-santosh-hegde-1-dec-2.jpg
Published on

ದಾವಣಗೆರೆ: ಇಂದಿನ ವಿದ್ಯಾರ್ಥಿಗಳು ಜೀವನದಲ್ಲಿ ತೃಪ್ತಿ ಹಾಗೂ ಮಾನವೀಯತೆ ಬೆಳೆಸಿಕೊಳ್ಳಬೇಕು. ಅದರ ಮೂಲಕ ದೇಶದ ಭವಿಷ್ಯ ಬದಲಾಯಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಇಲ್ಲಿನ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಹಾಗೂ ಎಸ್‌ಜೆಜೆಎಂ ಪ್ರೌಢಶಾಲೆಗಳ 60ರ ಸಂಭ್ರಮ ಕಾರ್ಯಕ್ರಮದಲ್ಲಿ ಶನಿವಾರ ‘ಧರ್ಮ ಪ್ರಕಾಶಕ್ಕೊಂದು ಕಿರಣ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಯಾವುದಾದರೂ ವ್ಯಕ್ತಿ ಜೈಲಿಗೆ ಹೋಗಿಬಂದರೆ ನಮ್ಮ ಪಾಲಕರು ‘ಅತ್ತ ಹೋಗಬೇಡ’ ಎನ್ನುವ ಮೂಲಕ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ನೀಡುತ್ತಿದ್ದರು. ನಮ್ಮ ಸಮಾಜದ ಭಾವನೆ ಅಂದಿನ ವ್ಯವಸ್ಥೆಯತ್ತ ಹೋದಲ್ಲಿ ಬದಲಾವಣೆ ತರಬಹುದು ಎಂದರು.

ನಮ್ಮಲ್ಲಿನ ದುರಾಸೆಗೆ ಕಾನೂನಿನಿಂದ ಮಟ್ಟ ಹಾಕಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಇದ್ದರೂ ಭ್ರಷ್ಟಾಚಾರದ ಆರೋಪದಡಿ ಕೋರ್ಟ್ ಶಿಕ್ಷೆ ನೀಡಲು 50 ವರ್ಷದಷ್ಟು ತಡವಾಗುತ್ತಿದೆ. ಇಷ್ಟು ವಿಳಂಬವಾಗುವುದಾದರೆ ಅದಕ್ಕೆ ಯಾರು ತಾನೆ ಹೆದರುತ್ತಾರೆ ಎಂದು ಆತಂಕ ವ್ಯಪ್ತಪಡಿಸಿದರು.

ದುರಾಸೆ ಎಂಬುದೊಂದು ರೋಗ, ಅದಕ್ಕೆ ಮಿತಿ ಇಲ್ಲ. ಅದಕ್ಕೆ ತೃಪ್ತಿಯೇ ಮದ್ದು. ಅದನ್ನು ಅಂಗಡಿಗಳಲ್ಲಿ ಕೊಳ್ಳಲಾಗದು. ಹಾಸಿಗೆ ಇದ್ದಷ್ಟು ಕಾಲುಚಾಚುತ್ತೇನೆಂಬ ತೃಪ್ತಿ ಬೆಳೆಸಿಕೊಂಡಲ್ಲಿ ಅದುವೇ ದುರಾಸೆ ವಿರುದ್ಧದ ಶಸ್ತ್ರವಾದೀತು ಎಂದರು.

ನಮ್ಮ ಕಾಲದಲ್ಲಿ ನೈತಿಕ ವಿಜ್ಞಾನ ಎಂಬ ಪಠ್ಯವಿತ್ತು. ಈಗದು ಇಲ್ಲ. ಇಂದಿನ ಪಾಲಕರ ಮಾಡುವ ಉದ್ಯೋಗ ಕೂಡ ಒಂದು ರೋಗವಾಗಿದೆ. ಕಚೇರಿ ಕೆಲಸವನ್ನು ಮನೆಯಲ್ಲಿ ಮಾಡುವ ಪಾಲಕರು ತಮ್ಮ ಮಕ್ಕಳಿಗೆ ಐಫೋನ್ ನೀಡುತ್ತಾರೆ. ಅದರಲ್ಲಿ ಮೌಲ್ಯಗಳು ಸಿಗುವುದಿಲ್ಲ ಎಂದು ಎಚ್ಚರಿಸಿದರು.

ಇಂದು ಪಾಕಿಸ್ಥಾನ, ಶ್ರೀಲಂಕಾದಲ್ಲಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಪಾಕಿಸ್ತಾನದಲ್ಲಿ ಒಂದು ಲೀ. ಹಾಲಿಗೆ 205 ರೂ. ಬೆಲೆ ಇದೆ. ನಮ್ಮ ದೇಶದಲ್ಲೂ ಅಂಥದ್ದೇ ಸ್ಥಿತಿ ಬಂದರೇ ಹೇಗೆ? ಇದು ಮುಂದುವರಿದರೆ ದೇಶ ವಿಭಜನೆ ಹಾಗೂ ರಾಜ್ಯಗಳ ವಿಘಟನೆಯೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಐಎಎಸ್, ಐಪಿಎಸ್‌ನಂತಹ ದೊಡ್ಡ ಹುದ್ದೆ ಅಲಂಕರಿಸಿದ ನಂತರ ಜನಸೇವೆಗೆ ಮುಂದಾಗಬೇಕು. ತಮ್ಮ ಆರ್ಥಿಕ ವ್ಯವಸ್ಥೆ ಉತ್ತಮಪಡಿಸುವ ಕಡೆಗೆ ಗಮನ ನೀಡಬಾರದು. ಪ್ರಾಮಾಣಿಕವಾಗಿ ಶ್ರೀಮಂತರಾಗಿ. ಆದರೆ ಮತ್ತೊಬ್ಬರ ಹೊಟ್ಟೆಗೆ ಕಲ್ಲು ಹೊಡೆಯುವ, ಮತ್ತೊಬ್ಬರ ಜೇಬಿಗೆ ಕೈ ಹಾಕದಿರಿ ಎಂದು ಕಿವಿಮಾತು ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಹಗರಣಗಳಿಂದಾಗಿ ಹೆಚ್ಚಿನ ಆರ್ಥಿಕ ನಷ್ಟವಾಗುತ್ತಿದೆ. ನೂರು ರೂಪಾಯಿ ಅಭಿವೃದ್ಧಿಗೆ ನೀಡಿದರೆ ಕೊನೆ ಹಂತಕ್ಕೆ 15 ಪೈಸೆ ಮಾತ್ರ ತಲುಪುತ್ತದೆ ಎಂಬುದಾಗಿ ಪ್ರಧಾನಿಯೊಬ್ಬರು ಹೇಳಿದ್ದರು. ನಮ್ಮೊಳಗೆ ತೃಪ್ತಿ ಅಳವಡಿಸಿಕೊಂಡರೆ ಇಂತಹ ದುರಾಸೆ ನೀಗಬಹುದು ಎಂದರು.

ನಾನು ಲೋಕಾಯುಕ್ತಕ್ಕೆ ಬಂದ ನಂತರವೇ ಸಮಾಜದಲ್ಲಿ ಅನ್ಯಾಯ ತಿಳಿಯಿತು ಮೂವರು ಮುಖ್ಯಮಂತ್ರಿ, 8 ಮಂದಿ ಸಚಿವರು, 150 ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಭ್ರಷ್ಟಾಚಾರ ಆರೋಪದ ದೂರು ನೀಡಿದ್ದೇನೆ. ಇದುವರೆಗೆ ಯಾರೊಬ್ಬರೂ ಬೆರಳು ಮಾಡಿ ತೋರಿಸಿದಂತೆ ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗೆ ಮಾಡಿದ್ದರೆ ನನ್ನನ್ನು ಓಡಿಸಿಬಿಡುತ್ತಿದ್ದರು ಎಂದು ಹೇಳಿದರು.

ವಾಗ್ಮಿ ಎಚ್.ಬಿ.ಮಂಜುನಾಥ್ ಮಾತನಾಡಿ ಮುರಿಗೆಪ್ಪ ಎಂ ಚಿಗಟೇರಿ ಅವರು ಅಂದಿನ ಕಾಲದಲ್ಲೇ ಇಂಗ್ಲಿಷ್ ಮಾಧ್ಯಮದ ಔಚಿತ್ಯದ ಬಗ್ಗೆ ದೂರದೃಷ್ಟಿ ಹೊಂದಿದ್ದರು. ಕೈಗಾರಿಕೆಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಅಂದು ಸುಲಭ ದರಕ್ಕೆ ಸಿಗುತ್ತಿದ್ದ ಆಸ್ತಿ ಮಾಡಲು ಅವರು ಮುಂದಾಗದೆ 25 ಸಾವಿರ ಹಣವನ್ನು ವಿದ್ಯಾಸಂಸ್ಥೆಗೆ ನೀಡಿದರು ಎಂದು ಸ್ಮರಿಸಿದರು.

ನಿವೃತ್ತ ಮುಖ್ಯ ಶಿಕ್ಷಕಿ ಅರುಂಧತಿ ಟಿ. ಸಜ್ಜನ್, ಸುವರ್ಣಾ ನಾಗೇಶ ಕವಿ, ಸಂಸ್ಥೆಯ ಗೌರವಾಧ್ಯಕ್ಷ ವೀರಣ್ಣ ವಿ. ಚಿಗಟೇರಿ ಇದ್ದರು. ಮನೋಹರ್ ಸ್ವಾಗತಿಸಿದರು. ಸೌಮ್ಯಾ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net