ದೇಶ ಸೇವೆಗೆ ಸದಾ ಸಿದ್ಧರಿರೋಣ; ಶಾಸಕ ಬಸವರಾಜ ಮತ್ತಿಮಡು

PH 08
Published on

ಕಮಲಾಪುರ: ಗಡಿಯಲ್ಲಿ ವೀರ ಯೋಧರು ಮಳೆ, ಚಳಿ, ಬಿಸಿಲೆನ್ನದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಂದಲೇ ನಾವೆಲ್ಲರೂ ದೇಶದೊಳಗೆ ಸುಖವಾಗಿ ಜೀವನ ನಡೆಸುತ್ತಿದ್ದೇವೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಓಕಳಿ ಗ್ರಾಮದಲ್ಲಿ ಶುಕ್ರವಾರ ನಿವೃತ್ತ ಯೋಧ ಶಿವಪುತ್ರಪ್ಪ ಧಾಬಿ ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಿ, ಬಳಿಕ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಹಂಬಲ ಇರಬೇಕು. ರಾಷ್ಟçಕ್ಕಾಗಿ ಮಡಿದ ಸೈನಿಕರ ಸೇವೆಯನ್ನು ಸದಾ ಸ್ಮರಿಸೋಣ. ದೇಶಕ್ಕೆ ಆಪತ್ತು ಉಂಟಾದಾಗ ಎಲ್ಲರೂ ಹೋರಾಡಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.

ನಿವೃತ್ತ ಯೋಧ ಶಿವಪುತ್ರಪ್ಪ ಧಾಬಿ ಮಾತನಾಡಿ, ಭಾರತ ಮಾತೆಯ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಸುದೈವ. ತಾಯ್ನಾಡಿನ ಜನರು ಇಷ್ಟೊಂದು ಅದ್ದೂರಿಯಾಗಿ ಸ್ವಾಗತ ಮಾಡಿರುವುದು ಸಾಕಷ್ಟು ಖುಷಿ ತಂದಿದೆ. ಪ್ರತಿಯೊಬ್ಬರೂ ರೈತ, ಸೈನಿಕ, ಶಿಕ್ಷಕರನ್ನು ಗೌರವಿಸಬೇಕು. ಮುಂದಿನ ದಿನಗಳಲ್ಲಿ ಗ್ರಾಮಕ್ಕಾಗಿ ಶ್ರಮಿಸುವೆ. 1995ರಲ್ಲಿ ಸೇನೆಗೆ ಸೇರಿದ್ದು, ಬಿಹಾರದ ರಾಂಚಿಯಿAದ ಸೇವೆ ಆರಂಭಿಸಿದ್ದೇನೆ. ಲಿಬನಾನಾ, ರಾಜಸ್ತಾನ, ಛತ್ತಿಸಗಢ, ಜಮ್ಮು ಕಾಶ್ಮೀರ, ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಮದ್ರಾಸ್ ರೆಜಿಮೆಂಟ್‌ನಲ್ಲಿ ಸುಬೇದಾರ್ ಆಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದೇನೆ. ಒಟ್ಟು 28 ವರ್ಷಗಳು ಸೇವೆ ಮಾಡಿದ್ದೇನೆ ಎಂದು ತಿಳಿಸಿದರು.

ಕಮಲಾಪುರದಿಂದ ಓಕಳಿ ಗ್ರಾಮದವರೆಗೆ ತೆರೆದ ವಾಹನದಲ್ಲಿ ನಿವೃತ್ತ ಯೋಧ ಶಿವಪುತ್ರಪ್ಪ ದಂಪತಿಯನ್ನು ಅದ್ದೂರಿ ಮೆರವಣಿಗೆ ನಡೆಸಲಾಯಿತು. ಅಪಾರ ಬೈಕ್‌ಗಳು ರಾಷ್ಟç ಧ್ವಜವನ್ನು ಇಟ್ಟುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡವು. ದಾರಿಯುದ್ದಕ್ಕೂ ಭಾರತ್ ಮಾತಾ ಕಿ ಜೈ.. ಜೈ ಜವಾನ್- ಜೈ ಕಿಸಾನ್.. ಭಾರತೀಯ ಯೋಧರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಪ್ರಮುಖರಾದ ದೇವಿಂದ್ರಪ್ಪ ಕಾಮಜಿ, ಶಿವಶರಣಪ್ಪ ಮುಗಳಿ, ಮಲ್ಲಿಕಾರ್ಜುನ ಶೇರಿ, ಬಸವರಾಜ ಶೇರಿ, ಶಿವಾನಂದ ಧಾಬಿ, ಶಿವಕುಮಾರ ಪುರಾಣಿಕ, ಮಹದೇವಪ್ಪ ಯರಬಾಗ, ರೇವಣಸಿದ್ದಪ್ಪ ಮಾಲಿಪಾಟೀಲ್, ಗುಂಡಪ್ಪ ಸಿರಡೋಣ, ಶಿವಕುಮಾರ ದೊಶೆಟ್ಟಿ, ತಯ್ಯಬ್ ಚೌದ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net