

ಮೈಸೂರು: ನಗರದ ಶಾರದಾ ವಿಲಾಸ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಸಹಯೋಗದಲ್ಲಿ ಕೇಂದ್ರ ಬಜೆಟ್ ವಿಶ್ಲೇಷಣೆ -2025 ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಅರ್ಥಶಾಸ್ತ್ರಜ್ಞ, ಶಿವಮೊಗ್ಗದ ನಿವೃತ್ತ ಪ್ರಾಂಶುಪಾಲ ಡಾ.ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಇದು 78ನೇ 50.65 ಲಕ್ಷ ಕೋಟಿ ರೂ. ಬೃಹತ್ ಮೊತ್ತದ ಕೇಂದ್ರ ಬಜೆಟ್ ಇದಾಗಿದ್ದು, 34.96 ಲಕ್ಷ ಕೋಟಿ ರೂ. ಆದಾಯವಾಗಿದೆ. 18,068 ಕೋಟಿ ರೂ. ವಿತ್ತೀಯ ಕೊರತೆ ಉಂಟಾಗಿದೆ ಎಂದರು.
ದೇಶದ ಮೊದಲ ಬಜೆಟ್‌ನಲ್ಲಿ (1947) 195 ಕೋಟಿ. ರೂ. ವೆಚ್ಚದ ಲೆಕ್ಕ ಸೂಚಿಸಿದ್ದರೆ, 171 ಕೋಟಿ ರೂ. ಆದಾಯವನ್ನು ತೋರಿಸಲಾಗಿತ್ತು. ಆಗ 24 ಕೋಟಿ ರೂ. ವಿತ್ತೀಯ ಕೊರತೆ ಉಂಟಾಗಿತ್ತು. ಅಂದಿನಿಂದಲೂ ಈ ವಿತ್ತೀಯ ಕೊರತೆ ಪ್ರತಿ ಬಜೆಟ್‌ನಲ್ಲೂ ಉಳಿದುಕೊಂಡು ಬಂದಿದೆ ಎಂದು ಹೇಳಿದರು.
ಸರ್ಕಾರ ಮಾಡಿರುವ ಸಾಲಕ್ಕೆ ಸಲ್ಲಿಸುವ ಬಡ್ಡಿಯು ಈ ಬಜೆಟ್‌ನ ಶೇ.20ರಷ್ಟು ಮೀಸಲಿಟ್ಟಿದೆ. ಇದು ಅದರ ಆದಾಯ ಮೂಲದ ಹಿನ್ನೆಲೆಯನ್ನು ಸೂಚಿಸುತ್ತದೆ. 2014ರಿಂದ 2025ರ ಕಾಲಾವಧಿಯಲ್ಲಿ ಆದಾಯ ತೆರಿಗೆ ವಿನಾಯಿತಿಯು 2.5 ಲಕ್ಷದಿಂದ 12 ಲಕ್ಷ ರೂ.ವರೆಗೆ ಏರಿಕೆಯಾಗಿರುವುದು ವಿಶೇಷ ಎಂದರು.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಆರ್.ದಿನೇಶ್ ಮಾತನಾಡಿ, ಆರ್ಥಿಕ ಸಧೃಡತೆ, ದೇಶವೊಂದರ ಭದ್ರತೆಗೆ ಅತ್ಯವಶ್ಯಕ ಎಂದರು.
ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಪ್ರೊ.ಸತ್ಯನಾರಾಯಣ ಮಾತನಾಡಿ, ಬಜೆಟ್ ಎಂಬುದು ದೇಶಕ್ಕೆ ಮಾತ್ರವಲ್ಲ, ಪ್ರತಿ ವ್ಯಕ್ತಿಯ ಬದುಕಿನ ಮತ್ತು ಭವಿಷ್ಯತ್ತಿನ ಕೀಲಿ ಕೈ. ವ್ಯಕ್ತಿ ಹಾಗೂ ದೇಶ ಆರ್ಥಿಕವಾಗಿ ಭದ್ರಗೊಂಡಾಗ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಪ್ರಾಂಶುಪಾಲೆ ಡಾ.ಎಂ.ದೇವಿಕಾ ಮಾತನಾಡಿ, ಇಂದಿನ ಶಿಕ್ಷಣವು ಅಂತರಶಿಸ್ತೀಯ ಹಾಗೂ ಬಹುಶಿಸ್ತೀಯ ಆಯಾಮವನ್ನು ಪಡೆದಿರುವುದರಿಂದ ಆರ್ಥಿಕ ಶಿಕ್ಷಣ ಇದರ ಭಾಗವಾಗಿರುವುದು ಸುದೈವದ ಸಂಗತಿ ಎಂದರು.
ಬಳಿಕ ವಾಣಿಜ್ಯ ವಿಭಾಗದ 25 ವಿದ್ಯಾರ್ಥಿಗಳು ಬಜೆಟ್‌ನ ಬೇರೆ ಬೇರೆ ವಲಯಗಳನ್ನು ಕುರಿತು ಅಧ್ಯಯನ ಪ್ರಬಂಧಗಳನ್ನು ಮಂಡಿಸಿದರು. ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ.ಎ.ಎನ್.ಜ್ಯೋತಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಜಿ.ಆನಂದ, ಕೆ.ಸಿ. ಆಶಾ ಹಾಗೂ ವಿ.ಪುನೀತ್ ಇದ್ದರು.