ದೇಶ ವಿರೋಧಿಗಳ ಮೇಲೆ ಕಠಿಣ ಕಾನೂನು ಕ್ರಮವಾಗಲಿ: ಪ್ರತಿಭಟನೆ

ದೇಶ ವಿರೋಧಿಗಳ ಮೇಲೆ ಕಠಿಣ ಕಾನೂನು ಕ್ರಮವಾಗಲಿ: ಪ್ರತಿಭಟನೆ
Published on

ಹಾಸನ: ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಹಾಗೂ ಬಾಂಬ್ ಸ್ಫೋಟಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಯೋತ್ಪಾದನೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಗುರುವಾರ ಪ್ರತಿಭಟಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ವಿಶ್ವ ಹಿಂದು ಪರಿಷತ್ತು ವಿಭಾಗದ ಸಹಸಂಯೋಜಕ ಪ್ರಬಂಜನ್ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿರುತ್ತದೆ. ಇದು ದೇಶದ ಭದ್ರತೆಗೆ ಮತ್ತು ಸಾರ್ವಭೌಮತೆಗೆ ಕುಂದು ತರುವಂತಹ ಘೋಷಣೆ ಆಗಿದೆ. ಘೋಷಣೆ ಕೂಗಿರುವಂತಹ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಅವರಿಗೆ ಅತ್ಯಂತ ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಅದೇ ರೀತಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಯೋತ್ಪಾದಕನೊಬ್ಬ ಬಾಂಬ್ ಸ್ಫೋಟಿಸಿರುವುದು ಆತಂಕದ ವಿಷಯವಾಗಿದೆ. ಈ ಭಯೋತ್ಪಾದನಾ ಕೃತ್ಯ ಕರ್ನಾಟಕದ ಜನತೆಯನ್ನು ಭಯದಿಂದ ಮುಳುಗುವಂತೆ ಮಾಡಿದೆ. ಸಮಗ್ರ ಕರ್ನಾಟಕದ ಜನತೆಯು ಈ ದುಷ್ಕೃತ್ಯವನ್ನು ಖಂಡಿಸುತ್ತಾರೆ. ಈ ಕೃತ್ಯ ಎಸಗಿದ ಭಯೋತ್ಪಾದಕರನ್ನು ಶೀಘ್ರವಾಗಿ ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಎರಡೂ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವಿಜಯಕುಮಾರ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಅನೂಪ್, ಶರತ್, ವಿಕಾಸ್, ಭಜರಂಗ ದಳದ ಅಭಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮುಖಂಡರಾದ ಕಿರಣ್, ವೇಣುಗೋಪಾಲ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ವೇದಾವತಿ, ದಿನೇಶ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net