

ಹಿರಿಯೂರು: ಭಾರತ ವಿಶ್ವ ಗುರುವಿನ ಸ್ಥಾನ ಪಡೆಯಲು, ದೇಶದ ಜನರ ಸುರಕ್ಷತೆಗೆ ಮತ್ತೊಮ್ಮೆ ನರೇಂದ್ರ ಮೋದಿ ಅವರ ನಾಯಕತ್ವದ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಮೋ ಬ್ರಿಗೇಡ್ 2.0 ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಜನ ಗಣ ಮನ ಬೆಸೆಯೋಣ ಹೆಸರಿನ ಬೈಕ್ ರ‌್ಯಾಲಿಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ, ದಕ್ಷ ನಾಯಕತ್ವದಲ್ಲಿ ದೇಶದ ಎಲ್ಲ ಜಾತಿ, ಧರ್ಮದ ಜನರನ್ನು ಬೆಸೆಯುವ ಪ್ರಯತ್ನ ಬಿಜೆಪಿ ಸರ್ಕಾರ ಮಾಡುತ್ತಿದೆ. ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಒಡೆದು ಆಳುವ ನೀತಿ ಮೂಲಕ ಕಾಲಹರಣ ಮಾಡಿತು ಎಂದು ದೂರಿದರು.
ಬೈಕ್ ರ‌್ಯಾಲಿಗೆ ವಿಶ್ವ ಹಿಂದು ಪರಿಷತ್, ಭಜರಂಗ ದಳ, ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದರು. ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಮಸ್ಕಲ್ ಶ್ರೀನಿವಾಸ್, ಚಲ್ಮೇಶ್, ಯೋಗೀಶ್, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಎಂ.ಎಸ್.ರಾಘವೇಂದ್ರ, ವೆಂಕಟೇಶ್, ಎ.ರಾಘವೇಂದ್ರ, ಎಂ.ವಿ.ಹರ್ಷ, ಕೇಶವಮೂರ್ತಿ ಇತರರಿದ್ದರು.