

ಧಾರವಾಡ: ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಶತಮಾನೋತ್ಸವ ಅಂಗವಾಗಿ ಸಭಾದ ಆವರಣದಲ್ಲಿ ಸ್ಥಾಪಿಸಿರುವ 100 ಅಡಿ ಎತ್ತರದ ಧ್ವಜ ಸ್ತಂಭವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಉದ್ಘಾಟಿಸಿದರು.
ಈ ವೇಳೆ ಧ್ವಜರಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರ ಧ್ವಜ ಎತ್ತರಕ್ಕೆ ಏರಿದಂತೆ ಭಾರತಾಂಬೆಯ ಕೀರ್ತಿಯನ್ನೂ ಮುಗಿಲೆತ್ತರಕ್ಕೇರಿಸಬೇಕು. ದೇಶದ ಸೈನಿಕರು ಪ್ರತಿಕೂಲ ಹವಾಮಾನದಲ್ಲೂ ನಮ್ಮ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಸೈನಿಕರು, ಧ್ವಜ ಹಾಗೂ ರಾಷ್ಟ್ರದ ಇತರ ಸಂಗತಿಗಳ ಬಗ್ಗೆ ನಮ್ಮಲ್ಲಿ ಅಭಿಮಾನ ಇರಬೇಕು. ವಿದೇಶಿ ವಸ್ತುಗಳ ಬಳಕೆಗೆ ಕಡಿವಾಣ ಹಾಕಿ ಸ್ಥಳೀಯ ವಸ್ತುಗಳ ಬಳಕೆಗೆ ಆದ್ಯತೆ ನೀಡಿ, ಪ್ರಧಾನಮಂತ್ರಿ ಘೊಷಣೆ ಮಾಡಿದ ಆತ್ಮನಿರ್ಭರ ಯೋಜನೆಗೆ ಬೆಂಬಲ ನೀಡಬೇಕು ಎಂದರು.
ಮಾತೃ ಭಾಷೆಯ ಜತೆಗೆ ಇತರ ಭಾಷೆಗಳನ್ನೂ ಕಲಿಯಬೇಕು. ಆದರೆ, ಇಂದು ಹಿಂದಿ ಭಾಷೆಗಿಂತ ಆಂಗ್ಲ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಖೇದಕರ ಸಂಗತಿ ಎಂದ ಅವರು, ನಗರದಲ್ಲಿ ಅತ್ಯಂತ ಎತ್ತರದ ಧ್ವಜಸ್ತಂಭ ನಿರ್ವಿುಸಿದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪದಾಧಿಕಾರಿಗಳ ಕಾರ್ಯವನ್ನು ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ, ಕರೊನಾ ನಿಯಂತ್ರಣಕ್ಕೆ ಸೇವೆ ಸಲ್ಲಿಸಿದ ಡಾ. ಬಿ.ಡಿ. ಜತ್ತಿ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಕುಲಕರ್ಣಿ ಹಾಗೂ ಸಿ.ಬಿ. ಗುತ್ತಲ ಆಯುರ್ವೆದಿಕ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಸಿ. ಹೊಂಬಳ ಅವರನ್ನು ಸಚಿವರು ಸನ್ಮಾನಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಭಾದ ಅಧ್ಯಕ್ಷ ಈರೇಶ ಅಂಚಟಗೇರಿ, ಪದಾಧಿಕಾರಿಗಳಾದ ಎಂ.ಆರ್. ಪಾಟೀಲ, ಅರುಣ ಜೋಶಿ, ಡಾ. ಎಸ್.ಬಿ. ಹಿಂಚಿಗೇರಿ, ಎಸ್. ರಾಧಾಕೃಷ್ಣನ್, ಸಿಬ್ಬಂದಿ, ಇತರರು ಇದ್ದರು.