ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಹಿರಿದು

9 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ದೇಶ ಕಟ್ಟುವ ಕೆಲಸದಲ್ಲಿ ಶಿಕ್ಷಕರ ಪಾತ್ರ ಮುಖ್ಯ. ತರಗತಿಯಲ್ಲಿ ಪಾಠ ಮಾಡುವುದಷ್ಟೇ ಶಿಕ್ಷಕರ ಕಾಯಕವಲ್ಲ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಸಾಗುವುದನ್ನು, ಬೆಳೆಯುವುದನ್ನು ತಿಳಿಸಿಕೊಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ವಿಶ್ರಾಂತ ಸಹ ನಿರ್ದೇಶಕ ಆರ್.ಎಸ್. ಮುಳ್ಳೂರ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶಿವಗಂಗಾ ಮತ್ತು ವೀರಪ್ಪ ರಾಮಾಪುರ ದತ್ತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಸಮಾರಂಭದಲ್ಲಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು. ಶಿಕ್ಷಣದ ಉದ್ದೇಶ ಬರೀ ಅಕ್ಷರಾಭ್ಯಾಸ ಅಲ್ಲ. ವಿದ್ಯಾರ್ಥಿಗಳ ಸವಾಂಗೀಣ ಪ್ರಗತಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಾಜದ ಅಭಿವೃದ್ಧಿ ಸದೃಢ ದೇಶ ನಿರ್ಮಿಸುತ್ತದೆ. ಹೀಗಾಗಿ ಶಿಕ್ಷಕರು ಕಂಕಣಬದ್ಧರಾಗಿ ಕಾರ್ಯ ಮಾಡಬೇಕಿದೆ ಎಂದರು. ಪುರಸ್ಕಾರ ಸ್ವೀಕರಿಸಿದ ಸುಜಾತಾ ತಿಮ್ಮಾಪುರ ಮಾತನಾಡಿ, ನಿರಂತರ ಶ್ರಮ, ಪ್ರಯತ್ನ, ನಿರ್ದಿಷ್ಟ ಗುರಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸಂಘದಿಂದ ನೀಡುವ ಇಂತಹ ಗೌರವ, ಸನ್ಮಾನಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತದೆ. ಸಂಘದ ಸಂಪರ್ಕಕ್ಕೆ ಬರುವವರೆಲ್ಲರೂ ಸಹಜವಾಗಿ ಸಾಹಿತ್ಯದ ಆಸಕ್ತಿ ಹೊಂದುತ್ತಾರೆ ಎಂದರು. ಎಸ್.ಎಂ. ಹುಡೇದಮನಿ ಮಾತನಾಡಿ, ನಾವು ಮಾಡುವ ಕೆಲಸಗಳೆಲ್ಲವೂ ನಮಗೆ ಹೆಸರು ಕೊಡುತ್ತದೆ. ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪುರ ತಮ್ಮ ತಂದೆ ತಾಯಿ ಹೆಸರಿನಲ್ಲಿ ಸ್ಥಾಪಿಸಿದ ದತ್ತಿ ಶಿಕ್ಷಕ ಕುಲದ ಗೌರವ ಹೆಚ್ಚಿಸಿದೆ. ಶಿಕ್ಷಕ ದಂಪತಿಗೆ ಸಾಮಾಜಿಕ ಬದುಕಿನ ಜತೆಗೆ ಖಾಸಗಿ ಬದುಕನ್ನು ಆದರ್ಶಯುತವಾಗಿ ಕಳೆಯಲು ಪ್ರೇರಣೆಯಾಗಿದೆ ಎಂದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ವಿ.ಎನ್. ಕೀರ್ತಿವತಿ, ಶರಣು ಹಂಡಿ, ಡಾ. ಲಿಂಗರಾಜ ರಾಮಾಪುರ, ಸತೀಶ ತುರಮರಿ, ಗುರು ತಿಗಡಿ, ಎಂ.ಎಂ. ಚಿಕ್ಕಮಠ, ನಿಂಗಣ್ಣ ಕುಂಟಿ, ಪ್ರಮೀಳಾ ಜಕ್ಕಣ್ಣವರ, ಮಹಾಂತೇಶ ನರೇಗಲ್, ಜ್ಯೋತಿ ಭಾವಿಕಟ್ಟಿ, ಇತರರು ಇದ್ದರು. ಗುರು ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net