

ಚಿತ್ರದುರ್ಗ: ದೇಶ ಮತ್ತು ಸಮಾಜ ನಿರ್ಮಾಣಕ್ಕೆ ಬುದ್ಧ, ಬಸವ ಅವರ ಸಿದ್ಧಾಂತ ತುಂಬಾ ಅಗತ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಶಿವಶರಣ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್ ಲಾಡ್ ಫೌಂಡೇಷನ್, ಇಂಡೋ-ಟಿಬೆಟ್ ಸ್ನೇಹ ಸೊಸೈಟಿಯಿಂದ ಮುರುಘಾಮಠದ ಅನುಭವ ಮಂಟಪದಲ್ಲಿ ಟಿಬೆಟ್ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದಲ್ಲಿ ಕೋಟ್ಯಂತರ ಮಂದಿ ಮನಃ ಪರಿವರ್ತನೆ ಆಗಿರುವುದಕ್ಕೆ ಭಗವಾನ್ ಬುದ್ಧ ಕಾರಣ. 145 ಕೋಟಿ ಜನಸಂಖ್ಯೆಯುಳ್ಳ ಭಾರತದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳ ವಿರುದ್ಧ ನಡೆದುಕೊಳ್ಳುವವರೇ ಹೆಚ್ಚಿದ್ದಾರೆ. ಒಟ್ಟು 50 ರಾಷ್ಟ್ರಗಳಲ್ಲಿ ಬೌದ್ಧ ಧರ್ಮವಿದೆ. ಜಗತ್ತಿನ ಶೇ. 7ರಷ್ಟು ಮಂದಿ ಬುದ್ಧನ ಅನುಯಾಯಿಯಾಗಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಮ್ಮಲ್ಲೂ ಬದಲಾವಣೆ ಅಗತ್ಯವಿದೆ ಎಂದು ಸಲಹೆ ನೀಡಿದರು.
ಐತಿಹಾಸಿಕ ಕಾರ್ಯಕ್ರಮ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಬುದ್ಧ ಮತ್ತು ಬಸವ ಭಾರತ ಕಂಡ ಅತ್ಯಂತ ಶ್ರೇಷ್ಠ ಸುಧಾರಕರು. ಭಿನ್ನ ದಾರಿಯಲ್ಲಿ ನಡೆದು ತಮ್ಮ ಕಾಲಘಟ್ಟದಲ್ಲಿ ಶೋಷಿತರ, ದೀನ ದಲಿತರ, ನೊಂದವರ ಪರವಾಗಿ ಧ್ವನಿ ಎತ್ತಿದವರು. ಅಹಿಂಸೆ, ಸಮಾನತೆ, ಮಾನವೀಯತೆ, ಕಾರುಣ್ಯ ಪ್ರಮುಖ ತತ್ವಗಳಾಗಿವೆ. ಅವುಗಳನ್ನು ಪಾಲಿಸೋಣ ಎಂದು ಹೇಳಿದರು.
ಚಿತ್ರದುರ್ಗದ ಪರಿಸರವೂ ಬೌದ್ಧ ಧರ್ಮ ಮಾರ್ಗದಲ್ಲಿ ನಡೆದಿದೆ. ಅದಕ್ಕೆ ಸಾಮ್ರಾಟ್ ಅಶೋಕನ ಕಾಲದ ಅನೇಕ ಶಾಸನಗಳೇ ನಿದರ್ಶನ. ಈ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನ ಸಂಸ್ಕೃತಿಯನ್ನು ಕೂಡ ನಾವಿಲ್ಲಿ ಕಾಣಬಹುದು. ಹೀಗಾಗಿ ಈ ಕಾರ್ಯಕ್ರಮ ಅವಿಸ್ಮರಣೀಯ, ಐತಿಹಾಸಿಕವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜಕ್ಕೆ ಇಬ್ಬರು ಮಹನೀಯರ ಕೊಡುಗೆ ಬಹು ದೊಡ್ಡದಿದೆ. ದೇಶದ ಪ್ರಧಾನಿಯಾಗಿದ್ದ ನೆಹರೂ, ಸಿಎಂಗಳಾಗಿದ್ದ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಟಿಬೆಟಿಯನ್ನರಿಗೆ ಆಶ್ರಯ ಕಲ್ಪಿಸಿದ್ದರು. ಹೀಗಾಗಿ ಸೌಹಾರ್ದಯುತ ಸಂಬಂಧವಿದೆ. ಭಾರತೀಯ ಸಮಾಜ ವೈವಿಧ್ಯತೆಗೆ ಸಾಕ್ಷಿಯಾಗಿದೆ ಎಂದರು.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಬೌದ್ಧ ಧರ್ಮವೂ ಅತ್ಯಂತ ಪುರಾತನವಾದುದು. ದಕ್ಷಿಣ ಭಾರತದಲ್ಲಿ 4-5ನೇ ಶತಮಾನದಲ್ಲಿದ್ದ ಕುರುಹುಗಳನ್ನು ಪತ್ತೆ ಹಚ್ಚಿ ಪುನರುಜ್ಜೀವನಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಬಸವಣ್ಣನ ತತ್ವಾದರ್ಶ, ಬುದ್ಧನ ಅಷ್ಠಾಂಗ ಮಾರ್ಗ ಸಮರ್ಪಕವಾಗಿ ವಿಶ್ವಕ್ಕೆ ಸಾರಿದ್ದರೆ, ಎಲ್ಲೆಡೆಯೂ ಶಾಂತಿಗೆ ಹೆಚ್ಚು ಮನ್ನಣೆ ದೊರೆಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಟಿಬೆಟ್ ಬೌದ್ಧ ಗುರು ದಲೈಲಾಮಾ ಅವರು ಅನಾರೋಗ್ಯ ಕಾರಣಕ್ಕೆ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಕಳುಹಿಸಿದ್ದಾರೆ. ಅದಕ್ಕಾಗಿ ನೇರ ಪ್ರಸಾರದ ಮೂಲಕ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದರು.
ಕರುಣೆ ಮತ್ತು ಮೈತ್ರಿಯ ಬದುಕು ಅತ್ಯಂತ ಶ್ರೇಷ್ಠವಾದುದು. ನಿಜಲಿಂಗಪ್ಪ ಅವರು ನನಗೆ ತುಂಬಾ ಆತ್ಮೀಯ ಗೆಳೆಯರಾಗಿದ್ದರು. ಕಠಿಣ ದಿನಗಳಲ್ಲಿ ಸಹಕಾರ ನೀಡಿದರು. ಹೀಗಾಗಿ ಕರ್ನಾಟಕದಲ್ಲಿ ಬೌದ್ಧಿಕ, ಸಾಂಸ್ಕೃತಿಕವಾಗಿ ಧರ್ಮ ಸ್ಥಾಪನೆಗೆ ಕಾರಣವಾಯಿತು. ಸತ್ಯ, ಅಹಿಂಸೆಗೆ ಆದ್ಯತೆ ನೀಡಿರುವ ಭಾರತದ ಕುರಿತು ನಮಗೆ ಹೆಚ್ಚಿನ ಗೌರವವಿದೆ. ಇಲ್ಲಿನ ಪುರಾತನ ಸಂಸ್ಕೃತಿ, ಮೌಲ್ಯಗಳು ಜಾಗೃತಿ ಮೂಡಿಸುವಲ್ಲೂ ಮುಂಚೂಣಿಯಲ್ಲಿವೆ ಎಂದು ದಲೈ ಲಾಮಾ ಅವರ ಸಂದೇಶವನ್ನು ಗೋಪಿನಾಥ್ ಓದಿದರು.
ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ, ಬುದ್ಧ, ಬಸವ, ಅಶೋಕ ಚಕ್ರವರ್ತಿ, ಅಂಬೇಡ್ಕರ್ ಇವರೆಲ್ಲರೂ ನಮ್ಮ ತಾತಂದಿರು. ಬುದ್ಧ ಮಾನವತಾ ಧರ್ಮ ಪ್ರತಿಪಾದಿಸಿದರು. ಬಸವಣ್ಣ ಸ್ಥಾಪಿಸಿದ್ದು, ಜಾತಿಯಲ್ಲ. ಅದೊಂದು ಪವಿತ್ರವಾದ ಧರ್ಮ. ಇಬ್ಬರೂ ಮಹನೀಯರು ವಿಶ್ವ ಸಂತರು ಎಂದು ಬಣ್ಣಿಸಿದರು.
ಡಾ.ಬಸವಕುಮಾರ ಸ್ವಾಮೀಜಿ, ಪ್ರಸನ್ನಾನಂದ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾರ್ಕ್ ರಾಷ್ಟ್ರಗಳ ಪ್ರತಿನಿಧಿ ಜುಗ್ಮೇ ಜುಂಗ್ನಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂರ್ತಿ, ಮುಖಂಡರಾದ ಜಿ.ಎಸ್.ಮಂಜುನಾಥ್, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಎಂ.ಕೆ.ತಾಜ್‌ಪೀರ್, ಓ.ಶಂಕರ್ ಇತರರಿದ್ದರು.