ದೇಶ ಕಂಡ ಪ್ರಬಲ ಪ್ರಧಾನಿ ಮೋದಿ

20kmr3
Published on

ಕಮಲನಗರ: ಸತತ ಎರಡನೇ ಬಾರಿಗೆ ಅಧಿಕಾರದಲ್ಲಿ ಬಂದು ದೇಶದ ಆಡಳಿತ ವ್ಯವಸ್ಥೆಯಲ್ಲಿ, ನೀತಿ ನಿರೂಪಣೆಗಳಲ್ಲಿ ಬದಲಾವಣೆ, ದೇಶದ ಆಡಳಿತ ಸುಧಾರಣೆ ಜತೆಗೆ ಹತ್ತಾರು ಮಹತ್ವದ ನಿರ್ಣಯದ ಮೂಲಕ ಭರವಸೆ ಮೂಡಿಸಿ, ದೇಶವನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುವಂತೆ ಮಾಡಿದ ನರೇಂದ್ರ ಮೋದಿ ಅವರು ದೇಶ ಕಂಡ ಪ್ರಬಲ ಪ್ರಧಾನಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 70ನೇ ವರ್ಷದ ಜನ್ಮದಿನದ ನಿಮಿತ್ತ ಪಟ್ಟಣದ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ಸೇವಾ ಸಪ್ತಾಹದ ಭಾಗವಾಗಿ ಭಾನುವಾರ ಬಿಜೆಪಿ ಏರ್ಪಡಿಸಿದ್ದ ಸಸಿ ನೆಡುವ ಹಾಗೂ ನಿರ್ಗತಿಕರಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್, ಜಿಎಸ್ಟಿ, ತ್ರಿವಳಿ ತಲಾಖ್ ನಿಷೇಧ, ಪಾಕ್ ಗೆ ಏರ್ ಸ್ಟ್ರೈಕ್ ಹಾಗೂ ಸರ್ಜಿಕಲ್ ಸ್ಟ್ರೈಕ್, ನಿವೃತ್ತ ಯೋಧರಿಗೆ ಒನ್ ರ್ಯಾಂಕ್ ಒನ್ ಪೆನ್ಶನ್, ಸೇನಾ ಮುಖ್ಯಸ್ಥರ ಸಾಂಸ್ಥೀಕರಣ ಸೇರಿ ಹಲವು ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ. ಎಲ್ಲ ವಿಚಾರಗಳಿಂದ ಮೋದಿ ದೇಶ ಕಂಡ ಎಲ್ಲ ಪ್ರಧಾನಿಗಳಿಗಿಂತ ವಿಭಿನ್ನ ನೆಲೆಯಲ್ಲಿ ನಿಲ್ಲುವ ಮೂಲಕ ಪ್ರಬಲ ಪ್ರಧಾನಿ ಎನಿಸಿಕೊಂಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಿರಣ ಪಾಟೀಲ್ ಮಾತನಾಡಿ, ಬಿಜೆಪಿಯಿಂದ ಸೇವಾ ಹೀ ಸಂಘಟನೆ ಎಂಬ ಪರಿಕಲ್ಪನೆಯಲ್ಲಿ ಸೆ.14 ರಿಂದ ಅ.2ರ ವರೆಗೆ ವಿವಿಧ ರೀತಿಯ ಸೇವಾ ಚಟುವಟಿಕೆ ಆಯೋಜಿಸಿ ಸೇವಾ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ ಮಾತನಾಡಿ, ಸೇವಾ ಸಪ್ತಾಹ ನಿಮಿತ್ತ ಕಾರ್ಯಕರ್ತರಿಂದ ರಕ್ತದಾನ ಶಿಬಿರ, ಪ್ರತಿಬೂತ್ ನಲ್ಲಿ ವೃಕ್ಷಾರೋಪಣ, ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ನಿಷೇಧ ಸಂಕಲ್ಪದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ತಾಪಂ ಸದಸ್ಯ ಗಿರೀಶ ಒಡೆಯರ್, ನೀಲಕಂಠರಾವ ಕಾಂಬಳೆ, ರಂಗರಾವ ಜಾಧವ್, ಬಾಲಾಜಿ ತೇಲಂಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net