

ಬೀದರ್: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಭಾರತವನ್ನು ಬಲಿಷ್ಠ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಮಹತ್ತರ ನಿರ್ಧಾರಗಳನ್ನು ಕೈಗೊಂಡಿದ್ದು, ದೇಶ ಕಂಡ ಅಪರೂಪದ ಪ್ರಧಾನಿ ಅವರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ ಹೇಳಿದರು.
ಬಿಜೆಪಿ ಬೀದರ್ ನಗರ ಘಟಕದ ಎಸ್ಟಿ ಮೋರ್ಚಾ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ 70ನೇ ಜನ್ಮ ದಿನಾಚರಣೆ ನಿಮಿತ್ತ ಸೋಮವಾರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಛತಾ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸಂರಕ್ಷಣೆ, ಆರ್ಥಿಕ ಸದೃಢತೆ, ಅಭಿವೃದ್ಧಿ ಸೇರಿದಂತೆ ಎಲ್ಲ ವಿಚಾರಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಕಂಡ ಎಲ್ಲ ಪ್ರಧಾನಿಗಳಿಗಿಂತ ವಿಭಿನ್ನ ನೆಲೆಯಲ್ಲಿ ನಿಲ್ಲುತ್ತಾರೆ ಎಂದರು.
ಮೋದಿಜಿ ಜನ್ಮ ದಿನದ ನಿಮಿತ್ತ ಸೇವಾ ಸಪ್ತಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕರ್ತರಿಂದ ರಕ್ತದಾನ ಶಿಬಿರ, ಪ್ರತಿಬೂತ್ ನಲ್ಲಿ ಸಸಿ ನೆಡುವಿಕೆ, ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ನಿಷೇಧ ಸಂಕಲ್ಪ ಸೇರಿದಂತೆ ಜಿಲ್ಲಾದ್ಯಂತ ಹಲವು ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾಲೇಜಿನ ಆವರಣದಲ್ಲಿ ಕಸ ತೆಗೆದು ಸ್ವಚ್ಛತೆ ಮಾಡಲಾಯಿತು. ಪಕ್ಷದ ಪ್ರಮುಖರು ಪೊರಕೆ ಹಿಡಿದು ಕಸಗುಡಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣೆ, ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಎಸ್ಟಿ ಮೋರ್ಚಾ ನಗರಾಧ್ಯಕ್ಷ ರಮೇಶ ಬಿರಾದಾರ, ಪ್ರಮುಖರಾದ ಕಿರಣ ಪಾಲಂ, ಅನೀಲ ರಾಜಗೀರಾ, ಅವಿನಾಶ ಬರಿದಾಬಾದೆ, ಕಿಶನ್ ಜಮಾದಾರ, ಭೂಷಣ ಪಾಠಕ್, ನರೇಶ ಗೌಳಿ, ಮಹೇಶ ಕುಲಕರ್ಣಿ, ಪ್ರಕಾಶ, ಸಂಜು, ಗೋಪಾಲ ಇತರರಿದ್ದರು.