ದೇಶ ಆರ್ಥಿಕತೆಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ:ಮಾಜಿ ಸಿಎಂ ಎಚ್‌ಡಿಕೆ

ದೇಶ ಆರ್ಥಿಕತೆಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ:ಮಾಜಿ ಸಿಎಂ ಎಚ್‌ಡಿಕೆ
Published on

ಗಂಡಸಿ: ಹಿಂದೆ ದೇವಾಲಯ ನಿರ್ಮಾಣ, ಜೀರ್ಣೋದ್ಧಾರಕ್ಕೆ ಮುಂದಾದಾಗ ದಾನಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಇರುತ್ತಿತ್ತು. ಈಗ ಕಾಲ ಬದಲಾಗಿದೆ. ದೇಗುಲ ನಿರ್ಮಾಣಕ್ಕೆ ದಾನ ನೀಡುವ ದಾನಿಗಳ ಸಂಖ್ಯೆ ಹೆಚ್ಚಳವಾಗಿದೆ. ಇಂದು ಪ್ರತಿ ಹಳ್ಳಿಗಳಲ್ಲೂ ಹೊಸ ದೇವಾಲಯಗಳು ನಿರ್ಮಾಣವಾಗುತ್ತಿವೆ. ಇದಕ್ಕೆಲ್ಲ ಮೂಲ ಕಾರಣ ದೇಶದ ಆರ್ಥಿಕತೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದ ಶ್ರೀ ಮಲ್ಲಿಗಮ್ಮ ಮತ್ತು ಶ್ರೀ ಮಲ್ಲೇಶ್ವರ ಸ್ವಾಮಿಯವರ ಚರಮೂರ್ತಿ ಮತ್ತು ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಶಿಖರ ಕಳಸ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಆರ್ಥಿಕತೆಯ ಗಾಳಿ ಬೀಸಿದ್ದು ಭಾರತ ದೇಶ ಆರ್ಥಿಕತೆಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಭವಿಷ್ಯ ನುಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಶ್ರೀಮಂತಿಕೆಯ ಪ್ರಮಾಣ ಹೆಚ್ಚಳವಾದಂತೆ ಸಮಾಜದಲ್ಲಿ ಮಾನವಿಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಉದಾಹರಣೆಗೆ ಗ್ರಾಮದಲ್ಲಿ ಯಾವುದೇ ಒಂದು ಜಗಳವಾದಾಗ ಗ್ರಾಮದ ಹಿರಿಯರು ಒಂದೆಡೆ ಕುಳಿತು ಸರಿ-ತಪ್ಪು ನಿರ್ಣಯ ಮಾಡುತ್ತಿದ್ದರು. ಈಗಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಸಣ್ಣ-ಪುಟ್ಟ ಗಲಾಟೆಗೂ ಕೋರ್ಟ್, ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿದ್ದಾರೆ. ಸೋದರತ್ವ, ಸಮಾನತೆ, ಕೂಡಿ ಬಾಳುವುದು ಭ್ರಾತೃತ್ವ ಮರೆಯಾಗುತ್ತಿದೆ. ಹಿಂದೆ ಗ್ರಾಮದಲ್ಲಿ ಬೀದಿ ದೀಪ ಇಲ್ಲದಿದ್ದರೂ ಪರಸ್ಪರ ಉಪಕಾರದ ಮನೋಭಾವನೆ ಎಲ್ಲರಲ್ಲೂ ಕಾಣುತ್ತಿತ್ತು. ನಮ್ಮ ತಾತ-ಮುತ್ತಾತಂದಿರ ಜೀವನ ಶೈಲಿಗೆ ಇಂದಿನ ಯುವ ಪೀಳಿಗೆ ಮರಳಿ ಸಮಾಜದಲ್ಲಿ ಪರಸ್ಪರ ಬಾಂಧವ್ಯದಿಂದ ಬದುಕುವುದನ್ನು ಕಲಿಯಬೇಕಿದೆ. ಶ್ರೀ ಮಲ್ಲೇಶ್ವರ ಸ್ವಾಮಿಯ ಕೃಪಾಕಟಾಕ್ಷದಿಂದ ಎಲ್ಲರ ಜೀವನದಲ್ಲೂ ಸುಖ ಶಾಂತಿ ನೆಲೆಸುವಂತೆ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಚಿವ ಎಚ್. ಡಿ.ರೇವಣ್ಣ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲಾವಧಿಯಲ್ಲಿ ಅರಸೀಕೆರೆ ಕ್ಷೇತ್ರಕ್ಕೆ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಉಪ ಕೇಂದ್ರಗಳು, ಕಾಂಕ್ರೀಟ್ ರಸ್ತೆಗಳು, ವಿವಿಧ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಈ ಕ್ಷೇತ್ರದ ಅಭಿವೃದ್ಧಿ ಮುಖ್ಯ ಕಾರಣಕರ್ತರಾಗಿದ್ದಾರೆ. ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಗುರಿ ನಮ್ಮದಾಗಿದ್ದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ನಮ್ಮ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಜೆಡಿಎಸ್ ಮುಖಂಡರಾದ ಬಾಣಾವಾರ ಅಶೋಕ್, ಹೊಸೂರು ಗಂಗಾಧರ್, ಅರಸೀಕೆರೆ ಸಿಕಂದರ್, ಸಾಮಿಲ್ ಮಲ್ಲೇಶಪ್ಪ, ಲಾಳನಕೆರೆ ಯೋಗೇಶ್, ಯರಗನಾಳು ಎಲ್‌ಐಸಿ ಉಮಾಮಹೇಶ್, ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net