

ಚಿತ್ರದುರ್ಗ: ಕನ್ನಡ ಮಾತ್ರವಲ್ಲದೇ ಭಾರತೀಯ ಸಿನಿಮಾ ರಂಗದಲ್ಲೇ ಮೈಲಿಗಲ್ಲು ಸ್ಥಾಪಿಸಿ, ಈಗಲೂ ಜನಮಾನಸದಲ್ಲಿ ಎವರ್‌ಗ್ರೀನ್ ಸಿನಿಮಾವಾಗಿಯೇ ಉಳಿದಿರುವ ‘ನಾಗರಹಾವು’ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ ಜೀವತುಂಬಿದ ಹಿರಿಯ ನಟಿ ಲೀಲಾವತಿ ಅವರನ್ನು ಐತಿಹಾಸಿಕ ಕೋಟೆನಾಡಿನ ಜನ ಎಂದಿಗೂ ಮರೆಯಲಾರರು….
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದಲ್ಲಿ ಹೊರಹೊಮ್ಮಿದ ಈ ಚಿತ್ರದ ಮೂಲಕ ಕೋಟೆನಾಡಿನೊಂದಿಗೆ ಲೀಲಾವತಿ ಅವರ ನಂಟು ಬೆಳೆಯಿತು. ಚಾಮಯ್ಯ ಮೇಷ್ಟ್ರು ಪತ್ನಿಯಾಗಿ, ರಾಮಾಚಾರಿ ಸಾಕು-ತಾಯಿಯಾಗಿ ಅವರು ಕೂಡ ಪ್ರಮುಖ ಪಾತ್ರವಾಗಿಯೇ ಬೆಳ್ಳಿತೆರೆಯ ಮೇಲೆ ರಾರಾಜಿಸಿದವರು.
ಚಿತ್ರದಲ್ಲಿ ತುಂಗಮ್ಮ (ಲೀಲಾವತಿ) ಪಾತ್ರ ಕಾಣಿಸಿಕೊಂಡಾಗಲೆಲ್ಲಾ ದೇವ್ರೇ-ದೇವ್ರೇ ಎಂಬ ಅವರ ಡೈಲಾಗ್ ಈಗಲೂ ಅಚ್ಚಳಿಯದೇ ಉಳಿದಿದೆ. ಈ ಸಿನಿಮಾ ನೋಡಿದ ನಂತರ ಅದೆಷ್ಟೋ ಮಹಿಳೆಯರು ತಮ್ಮ ಮಕ್ಕಳು ತಪ್ಪು ಮಾಡಿದಾಗ ದೇವ್ರೇ ದೇವ್ರೇ ಎನ್ನುವ ಮೂಲಕ ಇವರನ್ನು ಅನುಸರಿಸಿರುವ ನಿದರ್ಶನಗಳೂ ಇವೆ. ಅದು ಇಂದಿಗೂ ಮುಂದುವರೆದಿದೆ.
ಕೆಲ ಸಂದರ್ಭಗಳಲ್ಲಿ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ವೇಳೆಯೂ ತಮ್ಮ ಪಾತ್ರ ಜನರೊಟ್ಟಿಗೆ ಬೆರೆತುಕೊಂಡಿದ್ದನ್ನು ಸ್ವತಃ ಲೀಲಾವತಿ ಅವರೇ ಸ್ಮರಿಸಿಕೊಂಡಿದ್ದುಂಟು. 5 ದಶಕದ ಹಿಂದಿನ ಸಿನಿಮಾವಾದರೂ ಅಂದು-ಇಂದು ಅವಿಸ್ಮರಣೀಯವಾಗಿ ಉಳಿದ ಪಾತ್ರಗಳಲ್ಲಿ ತುಂಗಮ್ಮ ಕೂಡ ಪ್ರಮುಖ ಎಂಬುದು ಸಿನಿಮಾವನ್ನು ಪ್ರತಿ ಬಾರಿ ನೋಡಿದಾಗಲೆಲ್ಲಾ ಚಿತ್ರರಸಿಕರಿಗೆ ಅನಿಸದೇ ಇರಲಾರದು. ಅಷ್ಟರಮಟ್ಟಿಗೆ ಪಾತ್ರದೊಳಗೆ ಇಳಿಯುವ ಕಲಾ ತಪಸ್ವಿ ಲೀಲಾವತಿ.
ಈ ಚಿತ್ರದ ಯಶಸ್ಸಿನ ನಂತರ ಮೇರುನಟ ವಿಷ್ಣುವರ್ಧನ್ ಅಭಿನಯಿಸಿದ ಸಾಕಷ್ಟು ಚಿತ್ರಗಳಲ್ಲಿ ತಾಯಿ ಪಾತ್ರಕ್ಕೆ ಇವರನ್ನೇ ಹಲವು ನಿರ್ದೇಶಕರು ಆಯ್ಕೆ ಮಾಡಿಕೊಂಡು ತಾಯಿ-ಮಗನ ಪಾತ್ರಗಳನ್ನು ಯಶಸ್ವಿಯಾಗಿಸಿರುವುದನ್ನು ಕೋಟೆನಾಡಿನ ವಿಷ್ಣು ಅಭಿಮಾನಿಗಳು ಸ್ಮರಿಸಿದ್ದಾರೆ.
ಇಡೀ ಸಿನಿಮಾದಲ್ಲಿ ಕೇವಲ 15ರಿಂದ 20 ನಿಮಿಷದ ಪಾತ್ರವಾದರೂ ಜೀವಕಳೆ ತುಂಬಿದ ಧೃವತಾರೆ ಲೀಲಾವತಿ ಇನ್ನೂ ನೆನಪು ಮಾತ್ರ. ಆದರೆ, ತುಂಗಮ್ಮನ ಪಾತ್ರದಲ್ಲಿ ಕರುನಾಡಿಗೆ ಸದಾ ಜೀವಂತ. ಇಂತಹ ಮನೋಜ್ಞ ಅಭಿನೇತ್ರಿಯನ್ನು ಕಳೆದುಕೊಂಡಿದ್ದಕ್ಕೆ ಕೋಟೆನಾಡಿನಲ್ಲೂ ಜನ ಕಂಬನಿ ಮಿಡಿದಿದ್ದಾರೆ.
ಕರುನಾಡಿನ ಅನನ್ಯ ರತ್ನ: ನಾನು ಕೂಡ ನಾಗರಹಾವು ಸಿನಿಮಾದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆದ ವೇಳೆ ಲೀಲಾವತಿ ಅವರ ಅಭಿನಯವನ್ನು ಕಣ್ತುಂಬಿಕೊಂಡಿದ್ದೇನೆ. ಕೋಟೆ ಕೆಳಭಾಗದಲ್ಲಿ ಚಿತ್ರೀಕರಣಕ್ಕಾಗಿ ತಾತ್ಕಾಲಿಕವಾಗಿ ಮನೆ ನಿರ್ಮಿಸಲಾಗಿತ್ತು. ಅಲ್ಲಿ ಅವರು ತಂಗಿದ್ದರು. ಕೆಲ ನಿಮಿಷಗಳ ಪಾತ್ರವಾದರೂ ಇಂದಿಗೂ ಜೀವಂತವಾಗಿಯೇ ಉಳಿದಿದೆ ಎಂದು ಕಾದಂಬರಿಕಾರ ಬಿ.ಎಲ್.ವೇಣು ನೆನಪು ಮಾಡಿಕೊಂಡರು.
ಡಾ.ರಾಜೇಂದ್ರಬಾಬು ನಿರ್ದೇಶನದ ಒಲವಿನ ಉಡುಗೊರೆ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದೆ. ಆ ಸಿನಿಮಾದಲ್ಲೂ ಕೂಡ ನಟಿಸಿದ್ದರು. ನಟಿಯಾಗಿ ಮಾತ್ರವಲ್ಲ, ಪೋಷಕ ಪಾತ್ರಗಳಲ್ಲೂ ಮಿಂಚಿದ ಕರುನಾಡಿನ ಅನನ್ಯ ರತ್ನ. ವೈವಿಧ್ಯಮಯ ಪಾತ್ರಗಳಿಂದಾಗಿ ಈಗಲೂ ಅವರು ಹೆಸರುವಾಸಿ ಎಂದು ಸ್ಮರಿಸಿದರು.