ದೇವೇಗೌಡರು ಸಂಸತ್‌ಗೆ ಹಾಸನದಿಂದಲೇ ಸ್ಪರ್ಧಿಸಿದರೆ ಸ್ವಾಗತ

ದೇವೇಗೌಡರು ಸಂಸತ್‌ಗೆ ಹಾಸನದಿಂದಲೇ ಸ್ಪರ್ಧಿಸಿದರೆ ಸ್ವಾಗತ
Published on

ಹಾಸನ: ಚುನಾವಣೆ ಪ್ರಚಾರದ ವೇಳೆ ಹೇಳಿದ್ದಂತೆ ದೇವೇಗೌಡರ ಹುಟ್ಟು ಹಬ್ಬಕ್ಕೆ ಸ್ವರೂಪ್ ಅವರ ಗೆಲುವನ್ನು ಉಡುಗೊರೆಯಾಗಿ ನೀಡಿದ್ದೇವೆ. ಬರುವ ಲೋಕಸಭೆ ಚುನಾವಣೆಯಲ್ಲಿ ದೊಡ್ಡಗೌಡರು ಸ್ಪರ್ಧೆ ಮಾಡಲು ಇಚ್ಚಿಸಿದರೆ ಪ್ರಜ್ವಲ್ ಹಿಂದೆ ಸರಿಯಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದರು.

ದೇವೇಗೌಡರು ಲೋಕಸಭೆಗೆ ಸ್ಪರ್ಧೆ ಮಾಡಿದರೆ ಸ್ವಾಗತಾರ್ಹ. ನಮ್ಮ ಜಿಲ್ಲೆಯಿಂದಲೇ ಸ್ಪರ್ಧಿಸಿದರೆ ಸಂತೋಷ. ಅವರು ಇಚ್ಛೆಪಟ್ಟಲ್ಲಿ ಪ್ರಜ್ವಲ್ ಜತೆ ಮಾತನಾಡಿ ಒಪ್ಪಿಸುವ ಹೊಣೆ ನನ್ನದು. ಮೊದಲ ಆಧ್ಯತೆ ದೇವೇಗೌಡರಿಗೆ ಎಂದು ನಗರದ ಸಂಸದರ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾವು ಎಂದಿಗೂ ದೇವೇಗೌಡರನ್ನು ಕುಟುಂಬದಿಂದಾಗಲೀ, ಜಿಲ್ಲೆಯಿಂದಾಗಲೀ ಹೊರಗಿಟ್ಟಿಲ್ಲ. ಇದು ವಿರೋಧಿಗಳ ಕಲ್ಪನೆಯ ಮಾತುಗಳು. ಅಂತಹದ್ದೊಂದು ಬಯಕೆ ನಮ್ಮದಾಗಿಲ್ಲ. ಪ್ರಜ್ವಲ್ ಅವರನ್ನು ಸಂಸದ ಸ್ಥಾನಕ್ಕೆ ನಿಲ್ಲಿಸಬೇಕೆಂಬುದು ದೇವೇಗೌಡರ ತೀರ್ಮಾನವಾಗಿತ್ತು. ಅದರಂತೆ ನಾವೆಲ್ಲರೂ ನಡೆದುಕೊಂಡೆವು. ನೀವು ಆಚೆ ಹೋಗಿ ಪ್ರಜ್ವಲ್‌ಗೆ ಟಿಕೆಟ್ ಕೊಡಿ ಎಂದು ನಮ್ಮ ಕುಟುಂಬದ ಯಾರೊಬ್ಬರೂ ಒತ್ತಾಯಿಸಿರಲಿಲ್ಲ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಭವಾನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯ ಪ್ರಸ್ತಾಪವಾಗಿದ್ದನ್ನು ಕೆಲವು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ ಆ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ಯಾರೂ ಸಹ ಆ ಬಗ್ಗೆ ಮಾತನಾಡಿಲ್ಲ. ಭಗವಂತ ಯಾರಿಗೆ ಎಷ್ಟು ಕರುಣಿಸುತ್ತಾನೋ ಅಷ್ಟನ್ನು ಒಪ್ಪಿಕೊಳ್ಳುವ ಮನಸ್ಥಿತಿ ನನ್ನದು ಎಂದು ಹಿಂದೆಯೇ ಹೇಳಿದ್ದೇನೆ. ಭಗವಂತ ಏನು ಕೊಡುತ್ತಾನೆ ಅಷ್ಟನ್ನು ಮಾತ್ರ ಸ್ವೀಕಾರ ಮಾಡಬೇಕು ಎಂದರು ಹೇಳಿದರು.

ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರ ಹಿಡಿಯುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ. ದೇವೇಗೌಡರ ಜನ್ಮ ದಿನದಂದೇ ಹಾಸನದ ಮತದಾರರಿಗೆ ಧನ್ಯವಾದ ಸಲ್ಲಿಸಬೇಕು ಎಂಬ ಕಾರಣಕ್ಕೆ ಈ ದಿನ ಮಾತನಾಡುತ್ತಿದ್ದೇನೆ. ಸ್ವರೂಪ್ ಅವರನ್ನು ಗೆಲ್ಲಿಸಲೇಬೇಕೆಂದು ನಮ್ಮ ಇಡೀ ಕುಟುಂಬ ಒಟ್ಟಾಗಿ ಕೆಲಸ ಮಾಡಿದ್ದೆವೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಹಾಸನದ ಜನತೆ ಹೋರಾಟದ ಫಲವಾಗಿ ಇದು ಸಾಧ್ಯವಾಗಿದೆ. ಜೆಡಿಎಸ್‌ನಿಂದ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಬೇಕು ಎನ್ನುವುದು ಜನರ ಮನಸ್ಸಿನಲ್ಲಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಹೆಚ್.ಪಿ.ಸ್ವರೂಪ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸ್ವಾಮಿಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಹೆಚ್‌ಡಿಸಿಸಿ ಬ್ಯಾಂಕ್ ನಿದೇಶಕ ಬಿದರಿಕೆರೆ ಜಯರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net