ದೇವೇಗೌಡರಿಗೆ ಅವರ ಮಕ್ಕಳೇ ವೈರಿಗಳು

01 NMG 02
Published on

ನಾಗಮಂಗಲ: ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರಿಗೆ ಹಾಸನ ಅಥವಾ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದರೆ ಗೆಲುವು ಸಾಧಿಸಿ ಪಾರ್ಲಿಮೆಂಟ್‌ನಲ್ಲಿ ವಿದಾಯದ ಭಾಷಣ ಮಾಡುತ್ತಿದ್ದರು. ಆದರೆ ಅವರ ಮಕ್ಕಳೇ ತುಮಕೂರಿಗೆ ಕಳುಹಿಸಿ ಸೋಲಿಸುವ ಮೂಲಕ ಅವರಿಗೆ ನೋವು ಕೊಟ್ಟಿದ್ದಾರೆ. ಅವರ ಮಕ್ಕಳೇ ಅವರಿಗೆ ವೈರಿಗಳಾಗಿದ್ದಾರೆಯೇ ಹೊರತು ನಾವುಗಳಲ್ಲ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಹಿಂಭಾಗ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಮಂಗಳವಾರ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ನಾನು ಎಂದಿಗೂ ಲಘುವಾಗಿ ಮಾತನಾಡಿಲ್ಲ, ಅವರಿಗೆ ಎಂದೂ ಕೆಟ್ಟದ್ದನ್ನು ಬಯಸಿಲ್ಲ. ಅವರ ಮಕ್ಕಳು ಹಾಗೂ ಅವರ ಪಕ್ಷದವರೇ ಅವರಿಗೆ ದೊಡ್ಡ ವೈರಿಗಳಾಗಿದ್ದಾರೆ. ಆದರೆ ನಾವು ವೈರಿಗಳೆಂದು ಹೇಳುತ್ತಾರೆ. ನಿಜವಾದ ವೈರಿಗಳು ನಾವಲ್ಲ, ಅವರ ಮಕ್ಕಳು ಮತ್ತು ಪಕ್ಷದವರೇ. ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರ ಕುಟುಂಬವೇ ದೇವೇಗೌಡರ ಅನಾರೋಗ್ಯ ಸ್ಥಿತಿಯನ್ನು ಅರಿಯದೆ ತುಂಬ ನೋವು ಕೊಡುತ್ತಿದ್ದಾರೆ ಎಂದರು.

ಎಚ್.ಡಿ.ದೇವೇಗೌಡ, ಎಚ್.ಡಿ.ರೇವಣ್ಣ, ಸಿಂದ್ಯಾ ಮುಂತಾದವರು ಸೋಲು ಅನುಭವಿಸಿದ್ದ ಸಂದರ್ಭದಲ್ಲಿ ನಾನೊಬ್ಬ ಗೆದ್ದಿದ್ದೆ. ಆ ಸಂದರ್ಭದಲ್ಲಿ ಹಲವಾರು ಆಮಿಷಗಳು ಬಂದರೂ ನಾನು ಪಕ್ಷದಲ್ಲಿ ಉಳಿದುಕೊಂಡಿದ್ದು ದೇವೇಗೌಡರಿಗೋಸ್ಕರವಷ್ಟೇ. ಅವರ ಮೇಲೆ ದೂರುವಂತದ್ದು ಏನೂ ಇಲ್ಲ. ಅವರಿಗೆ ನನ್ನ ಮೇಲೆ ಪ್ರೀತಿ ಇತ್ತು. ಆದರೆ ಅವರ ಮಕ್ಕಳಿಗೋಸ್ಕರ ಅಂದು ಆ ರೀತಿ ತೀರ್ಮಾನ ಮಾಡಿದರು. ನಾನು ಅವರ ಜತೆ ಪಾರ್ಲಿಮೆಂಟ್‌ಗೆ ಹೋಗಿದ್ದವನು. ಅವರ ಜತೆ ಕುಳಿತು ಊಟ ಮಾಡಿದ್ದವನು. ದೇವೇಗೌಡರ ಆಡಳಿತ ವಿಚಾರವಾಗಿ ಯಾವುದೇ ತಕರಾರಿಲ್ಲ. ಆದರೆ ಕೆಲವು ರಾಜಕೀಯ ನಿರ್ಧಾರಗಳು ಸರಿಯಿಲ್ಲದಿರಬಹುದು ಎಂದು ಎಚ್.ಡಿ.ದೇವೇಗೌಡರ ಕುರಿತಾಗಿ ತಮ್ಮ ಮನದಾಳದ ಮಾತುಗಳನ್ನು ತಿಳಿಸಿದರು.

ಬಿಜೆಪಿ, ಜೆಡಿಎಸ್ ಘೋಷಣೆಗಷ್ಟೇ ಸೀಮಿತ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ಅನ್ನು ಪಕ್ಷತೀತವಾಗಿ ಎಲ್ಲ ಮನೆಗಳಿಗೆ ನಮ್ಮ ಮುಖಂಡರು ತಲುಪಿಸಿ ಮನವರಿಕೆ ಮಾಡಿಕೊಡಬೇಕಿದೆ. ಅದರಲ್ಲಿ ಯಾವುದೇ ರಾಜಕೀಯ ಬೇಡ. ಇದುವರೆಗೂ ಜೆಡಿಎಸ್ ಮತ್ತು ಬಿಜೆಪಿ ಘೋಷಣೆ ಮಾಡಿಕೊಂಡು ಬಂದಿವೆ. ಆದರೆ ಅದನ್ನು ಜಾರಿಗೆ ತರುವುದು ಮಾತ್ರ ಕಾಂಗ್ರೆಸ್ ಪಕ್ಷ. ಜೆಡಿಎಸ್ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿತು. ಬಿಜೆಪಿಯವರು ಅದನ್ನೇ ಮುಂದುವರಿಸಿದರು. ಆದರೆ ಕಾಂಗ್ರೆಸ್‌ನಿಂದ 10 ಕೆಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ಉಚಿತ ವಿದ್ಯುತ್, ಕೃಷಿಹೊಂಡ, ವಿದ್ಯಾರ್ಥಿಗಳಿಗೆ ಸೈಕಲ್, ಶೂ ಭಾಗ್ಯ, ಕ್ಷೀರ ಭಾಗ್ಯ, ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಳ ಸೇರಿದಂತೆ ಮುಂತಾದ ಜನಪರ ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಜೆ.ರಾಜೇಶ್, ದಿವಾಕರ್, ಕೆಪಿಸಿಸಿ ಸದಸ್ಯ ಹನುಮಂತು, ಮುಖಂಡರಾದ ಪ್ರಸನ್ನ, ಎಚ್.ಟಿ.ಕೃಷ್ಣೇಗೌಡ, ಜೋಗಿಗೌಡ, ಕೃಷ್ಣೇಗೌಡ, ಲಕ್ಷ್ಮೀಕಾಂತ್, ಗೀತಾದಾಸೇಗೌಡ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net