ದೇವೇಗೌಡರ ಹುಟ್ಟು ಹಬ್ಬ:ದೇವಾಲಯದಲ್ಲಿ ವಿಶೇಷ ಪೂಜೆ

ದೇವೇಗೌಡರ ಹುಟ್ಟು ಹಬ್ಬ:ದೇವಾಲಯದಲ್ಲಿ ವಿಶೇಷ ಪೂಜೆ
Published on

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 92ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಗರದ ಶ್ರೀ ಆದಿಚುಂಚನಗಿರಿ ಮಠದ
ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಶನಿವಾರ ಜೆಡಿಎಸ್ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಇನ್ನೂ ಹೆಚ್ಚಿನ ಆಯುರ್ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ನಮ್ಮ ಪಕ್ಷದ ಎಲ್ಲರೂ ಸೇರಿ ಮಾಜಿ ಪ್ರಧಾನಿಗಳ 92ನೇ ವರ್ಷದ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ನಾಡಿನ ಪರವಾಗಿ ಹಲವು ಹೋರಾಟ ಮಾಡಿರುವ, ವಿಶ್ವ ಭೂಪಟದಲ್ಲಿ ಹಾಸನ ಜಿಲ್ಲೆ ಗುರುತಿಸುವಂತೆ ಮಾಡಿದ, ರಾಜಕೀಯವಾಗಿಯೂ ದೊಡ್ಡ ಕೊಡುಗೆ ನೀಡಿರುವ ಹಿರಿಯರಾದ ದೇವೇಗೌಡರಿಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಇನ್ನೂ ಹಲವು ವರ್ಷ ನಮ್ಮ ನಡುವೆ ಇದ್ದು, ನಮ್ಮೆಲ್ಲರಿಗೂ ಸಲಹೆ-ಮಾರ್ಗದರ್ಶನ ನೀಡಬೇಕು. ಜೆಡಿಎಸ್ ಪಕ್ಷ ಈ ಹಂತಕ್ಕೆ ಬೆಳೆಯಲು ದೇವೇಗೌಡರೇ ಕಾರಣ. ಅವರಿಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯ ಕೋರುವೆ ಎಂದರು.
ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ದೇವೇಗೌಡರು ಇಳಿವಯಸ್ಸಿನಲ್ಲೂ ಇನ್ನೂ ಹೋರಾಡುವ ಶಕ್ತಿ ಉಳಿಸಿಕೊಂಡಿದ್ದಾರೆ. ರೈತರ ಕುಟುಂಬದಲ್ಲಿ ಹುಟ್ಟಿ ದೇಶದ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಸಾಧನೆ ಕಡಿಮೆ ಏನಲ್ಲ. ಸಚಿವ, ಸಿಎಂ, ಪ್ರಧಾನಿಯಾಗಿ ಹಲವು ಜನಪರ ಯೋಜನೆ ಜಾರಿ ಮಾಡಿದ್ದಾರೆ. ಯಾವುದೇ ಕಪ್ಪುಚುಕ್ಕಿ ಇಲ್ಲದೆ ಆಡಳಿತ ನಡೆಸಿದ್ದಾರೆ. ನಮ್ಮೆಲ್ಲರಿಗೆ ದೇವೇಗೌಡರ ಮಾರ್ಗದರ್ಶನ ಅತ್ಯವಶ್ಯಕವಾಗಿದ್ದು, ಅವರಿಗೆ ಭಗವಂತ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ಎಂದರು.
ಪೆನ್‌ಡ್ರೈವ್ ವೈರಲ್ ಹಿಂದೆ ಆರಂಭದಿಂದಲೂ ಡಿ.ಕೆ ಶಿವಕುಮಾರ್ ಮೇಲೆ ಅನುಮಾನ ಇತ್ತು. ದೇವರಾಜೇಗೌಡ ಅದನ್ನು ಬಹಿರಂಗ ಮಾಡಿದ್ದಾರೆ.ಎಸ್‌ಐಟಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ನೊಂದವರಿಗೆ ನ್ಯಾಯ ಸಿಗಬೇಕು. ಕಾರ್ತಿಕ್‌ಗೌಡರನ್ನು ಏಕೆ ಬಂಧಿಸಿಲ್ಲ. ಇದರ ಹಿಂದೆ ಯಾರೇ ಇದ್ದರೂ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು, ಮುಖಂಡರಾದ ಬಿದರಿಕೆರೆ ಜಯರಾಂ, ಮಂಜೇಗೌಡ, ಎಚ್.ಎಸ್.ಅನಿಲ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net