ದೇವೇಗೌಡರ ಕುಟುಂಬದ ವಿರುದ್ಧ ದ್ವೇಷಕ್ಕೆ ಜಿಲ್ಲೆಯನ್ನು ಹಾಳು ಮಾಡಬೇಡಿ

ದೇವೇಗೌಡರ ಕುಟುಂಬದ ವಿರುದ್ಧ ದ್ವೇಷಕ್ಕೆ ಜಿಲ್ಲೆಯನ್ನು ಹಾಳು ಮಾಡಬೇಡಿ
Published on

ಹಾಸನ: ದೇವೇಗೌಡರ ಕುಟುಂಬದ ವಿರುದ್ಧ ದ್ವೇಷ ರಾಜಕಾರಣ ಮಾಡಲು ಹೋಗಿ ಜಿಲ್ಲೆಯ ಬೆಳವಣಿಗೆಯನ್ನು ಹಾಳು ಮಾಡಬೇಡಿ ಮತ್ತು ಜನರನ್ನು ಕೊಲ್ಲಲು ಹೋಗಬೇಡಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ದೇವೇಗೌಡರ ಕುಟುಂಬ ಹಾಗೂ ರೇವಣ್ಣ ಅವರ ರಾಜಕೀಯ ಜೀವನ ಮುಗಿಯಿತು ಎಂದು ಯಾರಾದರೂ ಭಾವಿಸಿದ್ದರೆ ಅದು ಸುಳ್ಳು. ತನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥಹ ಅನೇಕ ಘಟನೆ ಎದುರಿಸಿದ್ದೇನೆ, ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ. ಅಭಿವೃದ್ದಿ ಬದಲಾಗಿ ಕೇವಲ ರಾಜಕೀಯ ಮಾಡಿಕೊಂಡು ಪ್ರಗತಿ ಕಡೆಗಣಿಸಿದ್ದಾರೆ ಎಂದು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ, ಪ್ರಜ್ವಲ್‌ರೇವಣ್ಣ ಮುಖ್ಯವಲ್ಲ, ಜನರ ಹಿತ ನಮಗೆ ಮುಖ್ಯ. ದೇವೇಗೌಡರು ಇರುವುದರಿಂದ ಜಿಲ್ಲೆಯನ್ನು ಈ ಮಟ್ಟಕ್ಕೆ ಬೆಳೆಸಲಾಗಿದೆ. ನಿಮ್ಮಿಂದ ಅಭಿವೃದ್ಧಿಗೊಳಿಸಲು ಸಾಧ್ಯವಾದರೆ ಮಾಡಿ, ಇಲ್ಲದಿದ್ದಾರೆ ಮುಂದೆ ಬಂದವರು ಮಾಡಿಕೊಂಡು ಹೋಗುತ್ತಾರೆ ಎಂದು ಹೇಳಿದರು.
ರಾಜಕೀಯ ಜೀವನದಲ್ಲಿ ನನ್ನ ಏರುಪೇರುಗಳನ್ನು ನೋಡಿದ್ದೇನೆ. 1990ರಲ್ಲಿ ದೇವೇಗೌಡುರು ನಮ್ಮ ಪಕ್ಷದ ಎಲ್ಲಾ ಶಾಸಕರು ಸೋತ್ತಿದ್ದರು, ಆದಾದ ಬಳಿಕ ನಡೆದ ಚುನಾವಣೆಯಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿಯಾಗಿ, ಪ್ರಧಾನಮಂತ್ರಿಯೂ ಆದರು ಹೀಗೆ ಸೋಲು-ಗೆಲುವು ಎರುಡು ನೋಡಿಕೊಂಡೇ ಬಂದಿದ್ದೇನೆ. ನಾನು 2004ರಿಂದ ಸತತವಾಗಿ ನಾಲ್ಕು ಬಾರಿ ದೇವರು, ಜನರ ಆಶೀರ್ವಾದದಿಂದ ಗೆಲುವು ಸಾಧಿಸಿ ಶಾಸಕ, ಮಂತ್ರಿಯಾಗಿ ಎಲ್ಲಾ ರೀತಿಯ ಕೆಲಸ ಮಾಡಿದ್ದೇನೆ. ಇದೀಗ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೂಮಾಫಿಯ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡುತ್ತಿದೆ. ಐಐಟಿಗೆ ಮೀಸಲಿಟ್ಟ ಭೂಮಿಯನ್ನು ಕೆಲವರು ಕಬಳಿಸಲು ಹುನ್ನಾರ ಮಾಡುತ್ತಿದ್ದಾರೆ, ಜಿಲ್ಲೆಗೆ ಐಐಟಿ ನೀಡಬೇಕು ಎಂಬ ಆಸೆ ಪ್ರಧಾನಮಂತ್ರಿಗೆ ಇದೆ.ಆದರೆ, ಕೆಲವರು ಆ ಭೂಮಿ ಮೇಲೆ ಕಣ್ಣು ಹಾಕಿದ್ದಾರೆ. ವಿಮಾನ ನಿಲ್ದಾಣದ ಮೂಲ ಯೋಜನೆಗೆ ಅಡ್ಡಿಪಡಿಸಿ ಅಲ್ಲೂ ಭೂಕ ಬಳಿಕೆಗೆ ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಇದೆಲ್ಲವನ್ನು ನೋಡಿಕೊಂಡು ನಾನೇನು ಸುಮ್ಮನೆ ಕೂರುವುದಿಲ್ಲ. ಏನು ಮಾಡಬೇಕೆಂದು ನನಗೂ ಗೊತ್ತಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಲಿಂಗೆಶ್, ಶಾಸಕ ಎಹೆಚ್.ಪಿ.ಸ್ವರೂಪ್ ಪ್ರಕಾಶ್ ಇದ್ದರು.

ದೇವರ ಮೇಲೆ ನಂಬಿಕೆ ಇದೆ:
ನನಗೆ ದೇವರು, ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಸಮಯ ಬಂದಾಗ ಏನೇನು ನಡೆದಿದೆ ಎನ್ನುವುದನ್ನು ವಿಧಾನಸಭೆಯಲ್ಲೇ ಎಲ್ಲವನ್ನು ಹೇಳುತ್ತೇನೆ. ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲುತ್ತಾರೆ ಎಂದಿದ್ದರು. ಆದರೆ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದರು. ಡಾ.ಸಿ.ಎನ್.ಮಂಜುನಾಥ್ ಅವರು ವೈದ್ಯ ವೃತ್ತಿಯಿಂದ ಇಳಿದ ಮೂರು ತಿಂಗಳಿನಲ್ಲಿ ಲೋಕಸಭೆ ಸದಸ್ಯರಾಗಲಿಲ್ಲವೇ, ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರೆ ಎಂದು ಯಾರಾದಾರು ಅಂದುಕೊಂಡಿದ್ರ, ಅದೆಲ್ಲ ದೇವರ ಆಶೀರ್ವಾದ. ಇನ್ಮುಂದೆ ನಾನು ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ. ರಾಜಕೀಯವಾಗಿ ಯಾರಿಂದಲೂ ಮುಗಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಸರ್ಕಾರದ ವಿರುದ್ಧ ಕಿಡಿ:
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ವರ್ಗಾವಣೆ ದಂಧೆ ಮಿತಿ ಮೀರಿದೆ. ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಚ್.ಡಿ. ರೇವಣ್ಣ ತೀವ್ರ ಅಸಮಾಧಾನ ಹೊರ ಹಾಕಿದರು.
ಪೊಲೀಸ್, ಕಂದಾಯ ಸೇರಿದಂತೆ ಯಾವ ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇನೆ. ಕೆಲ ಅಧಿಕಾರಿಗಳು, ದೇವೇಗೌಡರು, ರೇವಣ್ಣ ಅವರದು ಮುಗಿದೇ ಹೋಯಿತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅವರಿಂದ ನಾನು ರಾಜಕೀಯಕ್ಕೆ ಬಂದಿಲ್ಲ.ನಗರದಲ್ಲಿ ಐಐಟಿಗೆ ಮೀಸಲಿಟ್ಟದ್ದ ಜಾಗ ಕಬಳಿಸಲು ಹುನ್ನಾರ ನಡೆಯುತ್ತಿದೆ. ನಾನೇನು ಸುಮ್ಮನೆ ಕೂರಲ್ಲ ಇದರ ವಿರುದ್ಧ ಹೋರಾಟ ಮಾಡುವೆ ಎಂದು ಎಚ್ಚರಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ಐ.ಐ.ಟಿ, ವಿಮಾನ ನಿಲ್ದಾಣ, ರೈಲ್ವೆ ಮೇಲ್ಸೇತುವೆ ಹೀಗೆ ಹತ್ತು ಹಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹತ್ತಿಕ್ಕುವ ಕೆಲಸ ಮಾಡುತ್ತಿದೆ.ಮೂಲ ಯೋಜನೆಗೆ ಅನುಗುಣವಾಗಿ ವಿಮಾನ ನಿಲ್ದಾಣ ಮಾಡುವ ಬದಲಾಗಿ ಮನಬಂದಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net