

ಚಿಕ್ಕಮಗಳೂರು: ದೇವೀರಮ್ಮ ಬೆಟ್ಟದಲ್ಲಿ ದೀಪಾವಳಿ ದೀಪೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಸ್‌ಪಿ ವಿಕ್ರಮ ಅಮಟೆ ಅವರು ಖುದ್ದು ಕಾಲ್ನಡಿಗೆಯಲ್ಲೇ ದೇವೀರಮ್ಮ ಬೆಟ್ಟವನ್ನು ಏರಿ ಅಲ್ಲಿನ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು. ಜೊತೆಗೆ ಭಕ್ತರು ರಾತ್ರಿ ವೇಳೆ ಬೆಟ್ಟವನ್ನು ಏರುವ ವೇಳೆ ಯಾವುದೇ ಅವಘಡಗಳು ಸಂಭವಿಸದAತೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಹಾಗೂ ದೇವಾಲಯ ಸಮಿತಿಗೆ ನಿರ್ದೇಶನ ನೀಡಿದರು.
ಎಸ್‌ಪಿ ವಿಕ್ರಮ ಅಟನೆ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ದೇವಿರಮ್ಮ ದೀಪೋತ್ಸವದ ಆಯೋಜಕರು ಹಾಗೂ ಚಿಕ್ಕಮಗಳೂರು ಅಡ್ವೆಂಚರ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಹಾಗೂ ಗ್ರಾಮಸ್ಥರು ಭಕ್ತರು ಬೆಟ್ಟ ಹತ್ತುವ ಮಾರ್ಗದಲ್ಲೇ ಬೆಟ್ಟವನ್ನು ಹತ್ತಿ ಎಲ್ಲೆಲ್ಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪರಿಶೀಲನೆ ನಡೆಸಿದರು.
ಬಳಿಕ ಮಲ್ಲೇನಹಳ್ಳಿ ಬಿಂಡಿಗ ದೇವೀರಮ್ಮ ದೀಪೋತ್ಸವ ಆಯೋಜಕರು, ಸ್ವಯಂ ಸೇವಕರು ಹಾಗೂ ಊರಿನ ಪ್ರಮುಖರೊಂದಿಗೆ ಸಭೆ ನಡೆಸಿದ ಎಸ್‌ಪಿ ವಿಕ್ರಮ ಅಮಟೆ ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಅನುಸರಿಸಬೇಕಾದ ನೀತಿ ನಿಯಮಗಳು, ವಾಹನ ಪಾರ್ಕಿಂಗ್ ವ್ಯವಸ್ಥೆ, ಸಂಚಾರ ಸುರಕ್ಷತೆ, ಜಾತ್ರೆ ಬಂದೋಬಸ್ತ್ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ನಿರ್ದೇಶನ ನೀಡಿದರು.