

ಚಿತ್ರದುರ್ಗ: ದೇವಿ ಪುರಾಣ ವಾಚನ ಹಾಗೂ ಆಲಿಸುವುದರಿಂದ ನಮ್ಮ ಚಿಂತೆಗಳು ದೂರವಾಗುತ್ತವೆ ಎಂದು ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಕಾರ‌್ಯದರ್ಶಿ ಹುರಳಿ ಬಸವರಾಜು ಹೇಳಿದರು.
ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಗುರುವಾರ ಸಂಜೆ ಏರ್ಪಡಿಸಿದ್ದ ದೇವಿ ಪುರಾಣ ಪಾರಾಯಣ ಕಾರ‌್ಯಕ್ರಮದಲ್ಲಿ ಮಾತನಾಡಿ, ಭಗವಂತನ ನಾಮ ಸ್ಮರಣೆಯಿಂದ ಮನವನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು ಎಂದರು.
ಹಾಗಾಗಿಯೇ ಹಿರಿಯರು ಹಬ್ಬ ಹರಿದಿನ ಆಚರಿಸಿಕೊಂಡು ಬರುತ್ತಿದ್ದಾರೆ. ದೇವಿ ಪುರಾಣ ಪಾರಾಯಣದಿಂದ ಭಯ ದೂರವಾಗಿ, ಶಾಂತಿ, ನೆಮ್ಮದಿಗೆ ಕಾರಣವಾಗುತ್ತದೆ ಎಂದರು.
ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೊಲ್ಲರಹಟ್ಟಿ ಸಿ. ಈರಣ್ಣ ಮಲ್ಲಾಪುರ ದೇವಿ ಚರಿತ್ರೆ ವಾಚಿಸಿದರು. ಜಿ.ಎನ್. ವಿರೂಪಾಕ್ಷಪ್ಪ ಹಾರ‌್ಮೋನಿಯಂ, ಜಿ.ಸಿ. ಯಶವಂತ ತಬಲಾ ನುಡಿಸಿದರು.