ದೇವಿ ದೇಗುಲಗಳಲ್ಲಿ ಆಷಾಢ ಪೂಜೆ ಸಂಪನ್ನ

Baragerammadevi
Published on

ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆಗಳ ದೇಗುಲಗಳಲ್ಲಿ ದೇವಿ ಸಹಸ್ರ ನಾಮಾವಳಿ, ಅಷ್ಟೋತ್ತರ ಶತನಾಮಾವಳಿ, ಪುಷ್ಪಾರ್ಚನೆ, ಅಭಿಷೇಕದೊಂದಿಗೆ ವಿಶೇಷ ಪೂಜೆಗಳು ನಡೆದವು.

ದೇವಿಗೆ ಪ್ರಿಯವಾದ ಮಂಗಳವಾರ ಮತ್ತು ಶುಕ್ರವಾರದಂದು ಪೂಜಾ ಕೈಂಕರ್ಯಗಳು ಆಷಾಢ ಮಾಸ ಆರಂಭದಿಂದಲೂ ಪ್ರತಿ ವಾರ ಶಾಸ್ತ್ರೋಕ್ತವಾಗಿ ನೆರವೇರಿದವು. ಈ ಮೂಲಕ ಕೊನೆಯ ಶುಕ್ರವಾರದ ಪೂಜೆಯೂ ಸಂಪನ್ನಗೊಂಡಿತು.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿ ಯಲ್ಲಮ್ಮ, ನಗರದೇವತೆ ಬರಗೇರಮ್ಮ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಅಂತರಘಟ್ಟಮ್ಮ, ಕೊಲ್ಲಾಪುರದ ಮಹಾಲಕ್ಷ್ಮೀ, ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ಮಾಸ್ತಮ್ಮ, ಮೈಲಮ್ಮ, ಮಲೆನಾಡು ಚೌಡೇಶ್ವರಿ, ದುರ್ಗಾಮಾತೆ, ಬುಡ್ಡಮ್ಮ ಸೇರಿ ವಿವಿಧ ದೇಗುಲಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ವಿವಿಧ ದೇವಿ ದೇಗುಲಗಳಲ್ಲಿ ಬೆಳಗ್ಗೆ 11.30ರ ಮೊದಲ ಮಹಾಮಂಗಳಾರತಿ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾತ್ರಿ 10ರವರೆಗೂ ಸಾವಿರಾರು ಭಕ್ತರು ಭೇಟಿ ನೀಡಿದರು. ಹೂ, ಹಣ್ಣು, ಕಾಯಿ, ಅರಿಶಿಣ, ಕುಂಕುಮ ಸಮೇತ ಮಡಿಲಕ್ಕಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ, ಜಿಲ್ಲೆಗೆ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

ಕಮಲ ನಯನೆ ಅಲಂಕಾರ: ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಆಷಾಢದ ಕೊನೆಯ ಪೂಜೆ ಅಂಗವಾಗಿ ಮಹಾಲಕ್ಷ್ಮೀ ರೂಪದಲ್ಲಿ ಕಮಲ ನಯನೆ ಮಾದರಿಯಲ್ಲಿ ಅಲಂಕಾರ ಸೇವೆ ಜರುಗಿತು. ನೀಲಿ, ಬಿಳಿ, ಹಳದಿ, ಸೇವಂತಿ, ಬಟನ್ಸ್, ಕನಕಾಂಬರ, ಮಲ್ಲಿಗೆ, ಕಾಕಡಾ, ಪತ್ರೆ ಸೇರಿ ಇನ್ನಿತರೆ ಪುಷ್ಪಗಳಿಂದ, ನಿಂಬೆಹಣ್ಣು, ಬೃಹತ್ ಹೂವಿನ ಹಾರದಿಂದ ಅತ್ಯಾಕರ್ಷವಾಗಿ ಸಿಂಗರಿಸಲಾಗಿತ್ತು. ದೇವಿಯ ಸನ್ನಿಧಾನದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಅನೇಕರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಆಷಾಢದ ಕೊನೆಯ ಪೂಜೆಯಾದ್ದರಿಂದ ವಿವಿಧೆಡೆ ಭಕ್ತರ ಸಂಖ್ಯೆ ಹೆಚ್ಚಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net