ದೇವಿ ದೆಸೆಯಿಂದ ಉತ್ತಮ ಮಳೆ-ಬೆಳೆ

04 HBH. 3
Published on

ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣದಲ್ಲಿ ಒಂಬತ್ತು ವರ್ಷಗಳ ಬಳಿಕ ನರೇಗಲ್ ದುರುಗಮ್ಮ ದೇವಿ ಜಾತ್ರೆ ನಡೆಯುತ್ತಿದ್ದು, ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಮಾ.5ರಂದು ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಆ ಬಳಿಕ ನೈವೇದ್ಯ ಸಮರ್ಪಣೆ ಇತ್ಯಾದಿ ಪೂಜಾ ವಿಧಿ-ವಿಧಾನಗಳು ನೆರವೇರಲಿವೆ.

ಪಂಪಾಪತಿ ದೇವನ ಪತ್ನಿ ಪಂಪಾದೇವಿ, ಹಂಪಾದೇವಿಯಾಗಿ, ಬಳಿಕ ಈ ಪತಿಪತ್ನಿಯ ಹೆಸರಿನಲ್ಲಿ ಗ್ರಾಮದ ಹೆಸರು ಹಂಪಾಪಟ್ಟಣವಾಗಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಂಪಾಪಟ್ಟಣ ದೊಡ್ಡ ಊರು ಆಗಿತ್ತು. ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುತ್ತಿತ್ತು. ಈ ಕಾರಣಕ್ಕೆ ಹಂಪಾಪಟ್ಟಣ ಎಂದು ಊರಿಗೆ ಹೆಸರು ಬಂದಿದೆ. ಊರಲ್ಲಿ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಿನ್ನಾಳ್ ಹತ್ತರದ ನರೇಗಲ್‌ದಿಂದ ಬಂದಿರುವ ಕಾರಣಕ್ಕೆ ದುರುಗಮ್ಮದೇವಿಯನ್ನು ನರೇಗಲ್ ದುರುಗಮ್ಮ ದೇವಿ ಎಂದು ಕರೆಯಲಾಗುತ್ತದೆ. ನರೇಗಲ್ ದುರುಗಮ್ಮ ದೇವಿ ಗ್ರಾಮದ ಆರಾಧ್ಯದೇವಿಯಾಗಿದ್ದಾಳೆ. 1949ಕ್ಕೂ ಮೊದಲಿನಿಂದ ದೇವಿಯ ದೇಗುಲವಿತ್ತು. ಮಣ್ಣಿನಿಂದ ನಿರ್ಮಿಸಿದ್ದ ದೇವಸ್ಥಾನದಲ್ಲಿ ಕರೆಕಲ್ಲು, ಹಾಸುಬಂಡೆಗಳಿದ್ದವು. ಇಲ್ಲಿ ಒಡಮೂಡಿದ ದೇವಿಯನ್ನು ದುರುಗಮ್ಮ ಎಂದು ಕರೆಯಲಾಯಿತು ಎಂದು ಕೂಡ ಹೇಳಲಾಗುತ್ತದೆ.

ಹಗರಿಬೊಮ್ಮನಹಳ್ಳಿ ರಾಮನಗರದ ನರೇಗಲ್ ದುರುಗಮ್ಮ ದೇವಿಗೂ ಮತ್ತು ಹಂಪಾಪಟ್ಟಣದ ನರೇಗಲ್ ದುರಗಮ್ಮ ದೇವಿಗೂ ಸಾಮ್ಯತೆ ಇದೆ. ರಾಮನಗರದ ದುರುಗಮ್ಮ ಸಿಹಿ ನೈವೇದ್ಯದ ದೇವಿಯಾಗಿದ್ದಾಳೆ. 1960ಕ್ಕೂ ಮೊದಲಿನಿಂದ ಪ್ರತಿವರ್ಷ ದೇವಿಯ ಜಾತ್ರೆ ನಡೆಯುತ್ತಿತ್ತು. ಬಳಿಕ ಭಕ್ತರಿಗೆ ಭಾರವಾಗಬಾರದೆಂದು ವರ್ಷಗಳು ಕಳೆದಂತೆ 3, 5, ಈಗ 9 ವರ್ಷಕ್ಕೊಮ್ಮೆ ಜಾತ್ರೆ ಆಚರಿಸಲಾಗುತ್ತಿದೆ.

2008ರಲ್ಲಿ ಹೊಸಪೇಟೆಯ ಶಿಲ್ಪಿಯಿಂದ ತಯಾರಿಸಿದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನರೇಗಲ್ ದುರುಗಮ್ಮ ನೆಲೆಸಿರುವ ಗ್ರಾಮ ಉತ್ತುಂಗದ ಸ್ಥಿತಿಯಲ್ಲಿರುತ್ತದೆ. ಸುತ್ತಮುತ್ತ ವ್ಯಾಪ್ತಿಯಲ್ಲಿ ಕಾಲಕಾಲಕ್ಕೆ ಉತ್ತಮ ಮಳೆ, ಬೆಳೆ ಬರುತ್ತದೆ ಎನ್ನುವ ನಂಬಿಕೆ ಇದೆ. ಆ ನಂಬಿಕೆಯಿಂದಲೇ ಗ್ರಾಮದವರು ಯಾವುದೇ ಶುಭಕಾರ್ಯಗಳು ನಡೆದರೂ ತಾಯಿ ನರೇಗಲ್ ದುರುಗಮ್ಮನ ಆಶೀರ್ವಾದ ಪಡೆಯುತ್ತಾರೆ ಎಂದು ಗ್ರಾಮದ ಹಿರಿಯರಾದ ಗೆದ್ದಲಗಟ್ಟಿ ತಿಮ್ಮಣ್ಣ, ಹುಲ್ಲೇನವರ ಭೀಮಣ್ಣ, ಡಾ.ಜೆ.ಎಂ.ನಾಗಯ್ಯ ತಿಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net