ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ

Published on

ತಿಪಟೂರು: ನಗರದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿದ ಖದೀಮರು, ಬಾಗಿಲು ತೆಗೆಯಲು ಸಾಧ್ಯವಾಗದ ಕಾರಣ ಬಾಗಿಲಿಗೆ ಬೆಂಕಿ ಹಚ್ಚಿದ್ದಾರೆ. ಸೋಮವಾರ ರಾತ್ರಿ ದೇವಾಲಯ ಪ್ರವೇಶಿಸಿರುವ ಕಳ್ಳರು, ಪಕ್ಕದಲ್ಲೇ ಇರುವ ಅರ್ಚಕರ ಮನೆ ಮತ್ತು ಕಾವಲುಗಾರ ಮಲಗಿದ್ದ ಕೊಠಡಿಗೆ ಹೊರಗಿನಿಂದ ಚಿಲಕ ಹಾಕಿ ದೇವಾಲಯ ಪ್ರವೇಶಿಸುವ ಪ್ರಯತ್ನ ನಡೆಸಿದ್ದಾರೆ. ದೇವಾಲಯದ ಉತ್ತರ ದಿಕ್ಕಿನಲ್ಲಿ ಇರುವ ಬಾಗಿಲಿಗೆ ಅಳವಡಿಸಲಾಗಿರುವ ಕಬ್ಬಿಣದ ಚಿಲಕವನ್ನು ತೆಗೆಯಲು ಸಾಧ್ಯವಾಗದ ಕಾರಣ ಬಾಗಿಲಿಗೇ ಬೆಂಕಿ ಹಚ್ಚಿ, ಅದು ಸುಟ್ಟನಂತರ ಒಳ ಪ್ರವೇಶಿಸುವ ಪ್ರಯತ್ನ ವಿಫಲವಾಗಿದೆ. ಮರದ ಬಾಗಿಲು ಕಾಲು ಭಾಗ ಸುಟ್ಟಿದೆ. ದೇವಾಲಯ ಕಮಿಟಿ ಅಧ್ಯಕ್ಷ ಸಿಂಗ್ರಿ ದತ್ತಪ್ರಸಾದ್​ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತುಮಕೂರಿನಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಆಗಮಿಸಿದ್ದು, ಸಿ.ಸಿ. ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. 2 ತಿಂಗಳ ಹಿಂದೆಯೂ ದೇವಾಲಯದ ಪ್ರವೇಶದ್ವಾರದ ಬಾಗಿಲಿನ ಚಿಲಕ ತೆಗೆಯಲು ವಿಫಲ ಪ್ರಯತ್ನ ನಡೆಸಲಾಗಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net