ದೇವಾಲಯದ ವಿಚಾರದಲ್ಲಿ ವಿವಾದ

19rajesh3
Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ಶ್ರೀಸಿದ್ದಪ್ಪಾಜಿ ದೇವಾಲಯದ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ.

ವೀರನಪುರ ಗ್ರಾಮದಲ್ಲಿರುವ ಶ್ರೀವೀರಭದ್ರಸ್ವಾಮಿ, ಶ್ರೀಸಿದ್ದಪ್ಪಾಜಿ ಮಾರಮ್ಮ ದೇವಸ್ಥಾನದ ವಿಚಾರವಾಗಿ ಅ.17 ರಂದು ಗ್ರಾಮದ ಎಲ್ಲಾ ಜನಾಂಗದವರ ಸಮ್ಮುಖದಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ಮುಗಿಯುವ ಹಂತದಲ್ಲಿದ್ದಾಗ 2 ಸಮುದಾಯಗಳ ಕೆಲವರ ನಡುವೆ ನಡೆದ ಗಲಾಟೆ ವಿಚಾರವಾಗಿ ಪರಿಶಿಷ್ಟ ಜಾತಿಯ ಶಿವಕುಮಾರ್ ಎಂಬುವವರು ಅ.17 ರಂದು ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ವೀರನಪುರ ಗ್ರಾಮದಲ್ಲಿರುವ ಶ್ರೀವೀರಭದ್ರಸ್ವಾಮಿ, ಸಿದ್ದಪ್ಪಾಜಿ ಮತ್ತು ಮಾರಮ್ಮ ದೇವಸ್ಥಾನಗಳಿಗೆ ಪರಿಶಿಷ್ಟ ಜನಾಂಗದವರಿಗೆ ಪ್ರವೇಶ ನೀಡಿರುವುದಿಲ್ಲ. ದೇವಸ್ಥಾನದ ಆಸ್ತಿಯನ್ನು ಹರಾಜು ಪ್ರಕ್ರಿಯೆ ಮಾಡದೇ ಒಂದು ಜನಾಂಗದವರು ಮಾತ್ರ ಅಕ್ರಮವಾಗಿ ಅನುಭವಿಸಿಕೊಂಡು ಹೋಗುತ್ತಿದ್ದಾರೆ ಎಂಬ ವಿಚಾರವಾಗಿ ಶಾಸಮತಿ ಸಭೆ ನಡೆದಿತ್ತು.

ಸಭೆ ಇನ್ನೇನೋ ಮುಗಿಯುವ ಹಂತದಲ್ಲಿ ಇದ್ದಾಗ ಗ್ರಾಮದ ಗುರುಪ್ರಸಾದ್, ನಾಗಸುಂದ್ರ, ಮಹದೇವಪ್ಪ, ಶಂಭಪ್ಪ, ಮಂಜು, ನಾಗರಾಜು, ಮಂಜುನಾಥ, ಮಲ್ಲು ಕಮರಹಳ್ಳಿ, ಮಲ್ಲು, ಗಣೇಶ, ಮಣಿ, ನಾಗಪ್ಪ, ಕುಮಾರ, ಮುದ್ದಮಲ್ಲಪ್ಪ, ಮಧು, ಸೋಮಶೇಖರ ಹಾಗೂ ಸೋಮಶೇಖರ ಅವರನ್ನು ಒಂಗೊಂಡಂತೆ 17 ಜನರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶಿವಕುಮಾರ್ ಅವರು ಗುಂಡ್ಲುಪೇಟೆ ಪೊಲಿಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನನ್ವಯ ಗುಂಡ್ಲುಪೇಟೆ ಪೊಲೀಸರು ವೀರನಪುರ ಗ್ರಾಮದ 17 ಜನರ ಮೇಲೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ವೀರನಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಭಾನುವಾರ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ದಲಿತ ಸಮುದಾಯದವರು ಸುಳ್ಳು ದೂರು ನೀಡಿದ್ದು, ಆರೋಪಗಳಲ್ಲಿ ಸತ್ಯಾಂಶವಿಲ್ಲ. ನಾವು ಗ್ರಾಮದ ಎಲ್ಲಾ ದೇವಾಲಯಗಳಿಗೂ ಮುಕ್ತ ಪ್ರವೇಶವನ್ನು ನೀಡಿದ್ದು, ಕೆಲವರು ಗ್ರಾಮದಲ್ಲಿ ಅಶಾಂತಿಯನ್ನು ಉಂಟುಮಾಡಲು ಈಗೇ ಮಾಡಿದ್ದಾರೆ ಎಂದು ಆರೋಪಿಸಿದರು. ನಮಗೆ ನ್ಯಾಯ ದೊರೆಯದಿದ್ದರೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಸ್ಥಳಕ್ಕೆ ಚಾಮರಾಜನಗರ ಉಪವಿಭಾಗದ ಡಿವೈಎಸ್ಪಿ ಸ್ನೇಹಾರಾಜ್ ಅವರು ಭೇಟಿನೀಡಿ, ಗ್ರಾಮಸ್ಥರನ್ನು ಮನವೊಲಿಸಿದರು. ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟು ಗ್ರಾಮಕ್ಕೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net