

ಕೆ.ಆರ್. ಪೇಟೆ : ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು. ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಚಿಕ್ಕಸೋಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯವನ್ನು ಮಂಗಳವಾರ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಿಂದ ನಾವು ನೆಮ್ಮದಿ ಪಡೆಯಲು ಸಾಧ್ಯ ಎಂದರು. ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸ ಇರಿಸಿ ಶಾಸಕ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಹಳ್ಳಿಗಳಿಗೆ
ತೆರಳಲು ರಸ್ತೆಗಳು ಗುಂಡಿ ಬಿದ್ದಿವೆ ಎಂದು ಜನತೆ ದೂರುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಕೊರತೆ ಹೆಚ್ಚಾಗಿದೆ. ಜನರ ನಿರೀಕ್ಷೆಯ ಮಟ್ಟಕ್ಕೆ ಸ್ಪಂದಿಸಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ ಎಂದರು. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಬಹಿರಂಗವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷದ ಶಾಸಕನಾಗಿರುವ ನನ್ನ ಪಾಡು ಎಂಥದ್ದು ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಆದರೂ ಬೀದಿಗಿಳಿದು ಹೋರಾಟ ಮಾಡಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕಿನ 100 ಕಿ.ಮೀ. ರಸ್ತೆ ಅಭಿವೃದ್ಧಿಗೆ ಸಿ.ಎಸ್.ಆರ್. ಅನುದಾನ ಕೊಡಿಸುವುದಾಗಿ ಕೇಂದ್ರ ಸಚಿವ ಕುಮಾರ ಸ್ವಾಮಿ ಆಶ್ವಾಸನೆ ನೀಡಿದ್ದಾರೆ. ತಾಲೂಕಿನಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಾಡಿರಿ ಎಂದು ನಾನು ಮನವಿ ಮಾಡಿದ್ದೇನೆ. ಅದಕ್ಕೆ ಪೂರಕವಾಗಿ ಸ್ಪಂದಿಸುವೆಎಂದು ಅವರು ತಿಳಿಸಿದ್ದಾರೆ. ಈಗಾಗಲೇ ತಾಲೂಕಿನ ರೈಲ್ವೆ ಕಾಮಗಾರಿಗಳಿಗೆ ಸುಮಾರು ನೂರು ಕೋಟಿಗೂ ಅಧಿಕ ಅನುದಾನವನ್ನು ಕೇಂದ್ರದಿಂದ ಕುಮಾರಸ್ವಾಮಿ ಕೊಡಿಸಿದ್ದಾರೆ ಎಂದು ಮಂಜು ತಿಳಿಸಿದರು.
ನಿವೃತ್ತ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ ಮಿರ್ಜಿ, ಮುಖಂಡರಾದ ಜಾನಕೀರಾಮ್ ಸೇರಿದಂತೆ ವಿವಿಧ ಸಂಘ, ಸಂಸ್ಥೆ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.