ದೇವಾಲಯಗಳು ಭಾರತದ ಸಂಸ್ಕೃತಿಯಷ್ಟೇ ಪ್ರಾಚೀನ

mysore
Published on

ಮೈಸೂರು: ಪ್ರಾಚೀನ ಕಾಲದಿಂದಲೂ ದೇವಾಲಯಗಳು ಸಮಾಜದ ಬಹುಮುಖ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಇತಿಹಾಸ ತಜ್ಞ ಡಾ.ಮನೋಜ್ ಅಭಿಪ್ರಾಯಪಟ್ಟರು.

ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿರುವ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕರ್ನಾಟಕದ ದೇವಾಲಯಗಳ ಕಲೆ ಮತ್ತು ವಾಸ್ತುಶಿಲ್ಪ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಶ್ಚಿಮಾತ್ಯ ದೇಶಗಳನ್ನು ಗಮನಿಸಿದಾಗ ಅಲ್ಲಿನ ಧಾರ್ಮಿಕ ಜೀವನದ ದೃಷ್ಟಿಕೋನ ಹಾಗೂ ಸಾಮಾಜಿಕ ಜೀವನದ ದೃಷ್ಟಿಕೋನ ಬೇರೆಯಾಗಿರುತ್ತದೆ. ಈ ಎರಡು ಕವಲುಗಳು ಅಲ್ಲಿ ಸೇರುವ ಸಾಧ್ಯತೆಗಳಿಲ್ಲ. ಆದರೆ, ಭಾರತದಲ್ಲಿ ಎಲ್ಲ ದೃಷ್ಟಿಕೋನಗಳಿಂದಲೂ ನೋಡಿದರೂ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಜೀವವನ್ನು ಬೇರೆ ಬೇರೆ ಶಾಖೆಗಳೆಂದು ನೋಡಲು ಆಗುವುದಿಲ್ಲ ಎಂದರು.

ದೇವಾಲಯಗಳು ಭಾರತದ ಸಂಸ್ಕೃತಿಯಷ್ಟೇ ಪ್ರಾಚೀನವಾದದ್ದು. ದೇವಾಲಯಗಳ ಬಗ್ಗೆ, ಅವುಗಳ ಪರಂಪರೆಯ ಬಗ್ಗೆ ಶೈಕ್ಷಣಿಕ ದೃಷ್ಟಿಯಿಂದ ಅಧ್ಯಯನ ಮಾಡಿದ್ದು ಪಾಶ್ಚಿಮಾತ್ಯ ವಿದ್ವಾಂಸರು. ದೇವಾಲಯಗಳ ಬಗ್ಗೆ ಪ್ರಮುಖವಾಗಿ ಮೂರು ರೀತಿಯ ಜನರು ಅಧ್ಯಯನ ಮಾಡಲಾಗಿದೆ ಎಂದರು.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಬೇಲೂರು, ಹಳೇಬೀಡು ಸ್ಥಳಗಳನ್ನು ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ.

ಇನ್ನೂ ನಾಲ್ಕು ತಾಣಗಳು ತಾತ್ಕಲಿಕ ಪಟ್ಟಿಯಲ್ಲಿದೆ. ಈಗಾಗಲೇ ಭಾರತದ 62 ಸ್ಥಳಗಳು ತಾತ್ಕಾಲಿಕ ಪಟ್ಟಿಯಲ್ಲಿದೆ. ಒಂದು ಸ್ಥಳವನ್ನು ಈ ಪಟ್ಟಿಗೆ ಸೇರಿಸಲು ಒಂದು ವರ್ಷ ಬೇಕು. ಅಂದರೆ ಭಾರತದ 62 ಸ್ಥಳಗಳನ್ನು ಈ ಪಟ್ಟಿಗೆ ಸೇರಿಸಲು 62 ವರ್ಷ ಬೇಕಾಗುತ್ತದೆ. ಇಷ್ಟು ಸ್ಪರ್ಧೆಯ ನಡುವೆ ನಾವು ಸ್ಪರ್ಧೆ ಮಾಡಬೇಕಾಗುತ್ತಿದೆ ಎಂದರು.

ಇತಿಹಾಸ ತಜ್ಞ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್, ಇಲಾಖೆಯ ಉಪನಿರ್ದೇಶಕಿ ಡಾ.ಸಿ.ಎನ್.ಮಂಜುಳಾ, ಟಿ.ತಾರಕೇಶ, ಅಂಬರೀಶ್ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net