

ಶಿಕಾರಿಪುರ: ದೇವ ಮಂದಿರಗಳು ನಮ್ಮ ಶ್ರದ್ಧಾಕೇಂದ್ರಗಳು. ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆಗಳನ್ನು ಉಳಿಸಿ ಬೆಳೆಸುತ್ತಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಬ್ರಹ್ಮರಥೋತ್ಸವದ ನಿಮಿತ್ತ ಶ್ರೀಹುಚ್ಚರಾಯಸ್ವಾಮಿಗೆ ಕಂಕಣಧಾರಣೆ ನಂತರ ಪತ್ನಿ ಸಮೇತ ಸ್ವಾಮಿಯ ದರ್ಶನ ಪಡೆದು ಮಾತನಾಡಿದ ಅವರು, ಕ್ಷೇತ್ರಾಧಿಪತಿ ಹುಚ್ಚರಾಯಸ್ವಾಮಿ ಕರುಣೆಯಿಂದ ಜನತೆಯ ಸಂಕಷ್ಟಗಳು ನೀಗುತ್ತಿವೆ. ಈ ಕ್ಷೇತ್ರಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರು ಬಂದು ದರ್ಶನ ಪಡೆಯುತ್ತಾರೆ ಎಂದರು.
ಅಧಿಕ ಮಾಸದಲ್ಲಿ ಲಕ್ಷಾಂತರ ಜನ ಭಕ್ತರು ಆಗಮಿಸಿ ಹುಚ್ಚರಾಯಸ್ವಾಮಿ ದರ್ಶನ ಮಾಡುತ್ತಾರೆ. ಆ ಸಮಯದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ ಸೇರಿ ನಾಡಿನ ಹಲವೆಡೆಗಳಿಂದ ಜನಸಾಗರ ಹರಿದುಬರುತ್ತದೆ. ಆಗ ಒಂದೇ ದಿನ ಸಾತೇನಹಳ್ಳಿ ಕದರಮಂಡಲಗಿ ಮತ್ತು ಶಿಕಾರಿಪುರದ ಹುಚ್ಚರಾಯಸ್ವಾಮಿ ದರ್ಶನ ಮಾಡಿದರೆ ಕಾಶಿ ಪ್ರಯಾಗ ಹರಿದ್ವಾರ ಯಾತ್ರೆಮಾಡಿದಷ್ಟೇ ಪುಣ್ಯ ಎಂಬ ಪ್ರತೀತಿಯಿದೆ ಎಂದು ಹೇಳಿದರು.
ಸಂಪ್ರದಾಯ, ಆಚಾರ-ವಿಚಾರಗಳು, ಧಾರ್ಮಿಕ ವಿಧಿ ವಿಧಾನಗಳು ನಮ್ಮ ಹಿರಿಯರು ನಮಗೆ ಬಿಟ್ಟು ಹೋದಂತಹ ಬಳುವಳಿ , ಅವುಗಳನ್ನು ನಾವು ಉಳಿಸಿ ಬೆಳೆಸಿ ಧರ್ಮೋತ್ಥಾನ ಕಾರ್ಯ ಮಾಡಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಅದು ಸದಾಕಾಲ ನಮ್ಮ ನೆರಳಾಗಿ ನಿಂತು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.
ತೇಜಸ್ವಿನಿ ರಾಘವೇಂದ್ರ, ವಿದುಷಿ ವಿಜಯಲಕ್ಷ್ಮೀ ನಾಡಿಗ್, ಗಾಯಕಿ ಜಾಶಿಬಾಯಿ, ಉಮಾದೇವಿ, ಶ್ರೀದೇವಿ, ಗೌರಿ, ಅರ್ಚಕ ಉಮೇಶ್ ಭಟ್, ವೆಂಕಟೇಶ್, ಅಂಜನ್ ಭಟ್, ಪ್ರಕಾಶ್, ಹೋತನಕಟ್ಟೆ ಹರೀಶ್, ರಾಘವ್, ಸಂಜೀವ್ ಹೋತನಕಟ್ಟೆ, ಇತರರಿದ್ದರು.