ದೇವಾಲಯಗಳ ಸಂರಕ್ಷಣೆ ಅಗತ್ಯ

CBP-01
Published on

ಗೌರಿಬಿದನೂರು : ಹಿಂದು ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ದೇವಾಲಯಗಳ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ಅಲಕಾಪುರ ಏಶಿಯನ್ ಫ್ಯಾಬ್ ಟೆಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.

ತಾಲೂಕಿನ ಅಲಕಾಪುರ ಕಚೇರಿಯಲ್ಲಿ ಪೋತೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಅಭಿವೃದ್ಧಿಗೆ 1 ಲಕ್ಷ ರೂ. ಹಾಗೂ ಗಂಗಮ್ಮ ದೇವಾಲಯ ಅಭಿವೃದ್ಧಿಗೆ 50 ಸಾವಿರ ರೂ. ದೇಣಿಗೆ ನೀಡಿ ಮಾತನಾಡಿದರು. ದೇವಾಲಯಗಳು ಧಾರ್ಮಿಕ ಹಾಗೂ ಅಧ್ಯಾತ್ಮಿಕ ಚಟುವಟಿಕೆಗಳ ತಾಣವಾಗಿವೆ. ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಜಿಪಂ ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಪುಟ್ಟಸ್ವಾಮಿ ಗೌಡರು ತಾಲೂಕಿನ ಅನೇಕ ದೇವಾಲಯಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕೆ ಸಾಕಷ್ಟು ನೆರವು ಒದಗಿಸುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆ ಮುಂದುವರಿಸಲು ದೇವರು ಶಕ್ತಿ ನೀಡಲಿ ಎಂದು ತಿಳಿಸಿದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಜೆ.ಕಾಂತರಾಜು, ಮುಖಂಡರಾದ ಜಿ.ಕೆ.ಸತೀಶ್ ಕುಮಾರ್, ಕೆ.ಎಸ್.ಅನಂತರಾಜು, ಅಬ್ದುಲ್ಲಾ, ಶ್ರೀನಿವಾಸ್ ಗೌಡ, ನಾಗಸಂದ್ರ ಶ್ರೀನಾಥ್, ದೇವಾಲಯ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net