

ಕಡೂರು: ಸಖರಾಯಪಟ್ಟಣದ ಅಯ್ಯನಕೆರೆ ತಪ್ಪಲಿನಲ್ಲಿರುವ ಕೆಂಚರಾಯ ಸ್ವಾಮಿ ದೇವಾಲಯದ 40 ಎಕರೆ ಜಾಗವನ್ನು ಸರ್ವೇ ಮಾಡಿಸಿ ತಂತಿ ಬೇಲಿ ಹಾಕಿ ದೇವಾಲಯದ ಸುಪರ್ದಿಗೆ ವಹಿಸಿ ಕೊಡುವಂತೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಮಿಥುನ್ ಗೌಡ ಒತ್ತಾಯಿಸಿದರು.
ಸಖರಾಯಪಟ್ಟಣದ ನಾಡಕಚೇರಿಯ ಉಪತಹಸೀಲ್ದಾರ್ ಲೋಕೇಶನಾಯ್ಕ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿ, ದೇವಾಲಯದ ಜಮೀನು ಜಾಗವನ್ನು ಉಳಿಸಿಕೊಡಬೇಕಿದೆ. ಈ ಹಿಂದೆ ಹಸ್ತಿನಾಪುರ ಸರ್ವೇ ನಂ.1/1ರಲ್ಲಿ 40 ಎಕರೆ ಜಮೀನನ್ನು ಜಿಲ್ಲಾಧಿಕಾರಿ ಮೀಸಲಿಟ್ಟಿದ್ದರು. ಅದರಲ್ಲಿ ಎರಡು ಎಕರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರು ದೇವಾಲಯದ ಜಾಗವನ್ನು ರಕ್ಷಿಸಿಕೊಡಬೇಕಿದೆ ಎಂದರು.
ಬಜರಂಗದಳದ ಸಂಚಾಲಕ ಸಂಜಯ್ ಮಾತನಾಡಿ, ಸಖರಾಯಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಜಾಗವೇ ಇಲ್ಲದಂತಾಗಿದೆ. ಪ್ರತಿ ಜನವರಿಯಲ್ಲಿ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಇಲ್ಲಿ ಪೂಜೆ ಮುಗಿಸಿ ಕೆಂಚರಾಯಸ್ವಾಮಿ ದೇಗುಲಕ್ಕೆ ಭೇಟಿ ಕೊಡುತ್ತಾರೆ. ಅವರಿಗೆ ಅಲ್ಲಿ ಮೂಲ ಸೌಕರ್ಯ ಒದಗಿಸಲು ಸಮರ್ಪಕ ಜಾಗದ ಕೊರತೆ ಇದೆ. ಹೀಗಿರುವಾಗ ಇರುವ ಜಾಗವನ್ನು ಕಡಿಮೆ ಮಾಡಿದರೆ ಹೇಗೆ? ಇದರ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು. ಇದಕ್ಕೆ ನಿರ್ಲಕ್ಷ್ಯ ವಹಿಸಿದರೆ ಹೋರಾಟದ ಹಾದಿ ನಡೆಸುವುದು ಅನಿವಾರ್ಯವಾಗಲಿದೆ ಎಂದರು. ಗ್ರಾಮಸ್ಥರಾದ ನಂದೀಶ್, ವಿನಯ್, ಅಜಯ್, ಹೃತಿಕ್, ನಾಗಭೂಷಣ್, ಪುನಿತ್, ನಾಗರಾಜು, ಶಿವಮೂರ್ತಿ, ಬಿಜೆಪಿ ಮತ್ತು ಬಜರಂಗದಳದ ಪದಾಧಿಕಾರಿಗಳು ಇದ್ದರು.