

ಕಲಬುರಗಿ: ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ ಕೋರಬಾ ಸಾವು ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಆರೋಪಿತರ ಜತೆಗೆ ಶಾಮೀಲಾಗಿರುವ ಪೊಲೀಸರನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ಸೆ.೨೫ ರಂದು ಡಿಸಿ ಕಚೇರಿ ಮುಂದೆ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕೋಲಿ ಸಮಾಜ ಸಂಚಾಲಕರಾದ ಅವ್ವಣ್ಣ ಮ್ಯಾಕೇರಿ ತಿಳಿಸಿದರು.
ಸಮಾಜದ ಮುಖಂಡರ ಜತೆಗೂಡಿ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಮೃತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ತಪ್ಪು ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿರಂತರ ಹೋರಾಟದ ಪೂರ್ವಭಾವಿಯಾಗಿ ಸೆ.೨೧ ರಂದು ಅಫಜಲಪುರ, ಆಳಂದ, ೨೨ ರಂದು ಜೇವರ್ಗಿ, ಚಿತ್ತಾಪುರ, ೨೩ ರಂದು ಸೇಡಂ, ಚಿಂಚೋಳಿ ಹಾಗೂ ೨೪ ಎಂದು ಕಲಬುರಗಿ ನಗರದಲ್ಲಿ ಸಮಾಜದ ಪ್ರಮುಖರ ಸಭೆಗಳನ್ನು ನಡೆಸಲಾಗುವುದು. ೨೫ರಿಂದ ನಿರಂತರ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ದೇವಾನಂದ ಸಾವಿನ ಕುರಿತು ಜುಲೈ ೨೦ ರಂದು ನಾಲ್ವರ ವಿರುದ್ಧ ಮಾಡಬೂಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದುವರೆಗೂ ಆರೋಪಿತರನ್ನು ಬಂಧಿಸಿಲ್ಲ. ಎಂದು ಈಚೆಗೆ ಕಲಬುರಗಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರ‍್ನು ನಿಯೋಗ ಭೇಟಿ ಮಾಡಿದಾಗ ಕೂಡಲೇ ಆರೋಪಿತರ ಬಂಧಿಸಲು ಎಸ್ಪಿಯವರಿಗೆ ಸೂಚನೆ ನೀಡಿದ್ದಾರೆ. ಆದರೆ, ಇದುವರೆಗೂ ಬಂಧಿಸಿಲ್ಲ. ಪೊಲೀಸರು ಏಕೆ ಬಂಧನ ಮಾಡುತ್ತಿಲ್ಲ ಎಂಬುದು ಸಾಕಷ್ಟು ಅನುಮಾನ ಮೂಡಿಸಿದೆ. ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಶಾಮೀಲಾಗಿದ್ದಾರೆ. ಪೊಲೀಸರು ಆತನ ಕುಟುಂಬಕ್ಕೆ ೩ ಲಕ್ಷ ರೂ. ಪರಿಹಾರದಂತೆ ನೆರವು ನೀಡಿದ್ದು ನೋಡಿದರೆ ಖಾಕಿಗಳ ತಪ್ಪು ಕಂಡು ಬರುತ್ತದೆ ಎಂದು ಹೇಳಿದರು.
ಬಸವರಾಜ ಬೂದಿಹಾಳ, ಸಂತೋಷ ತಳವಾರ, ಶಾಂತಪ್ಪ ಕೂಡಿ, ಬಸವರಾಜ ಹರವಾಳ, ಅಂಬು ಡಿಗ್ಗಿ, ನಿಂಗಣ್ಣ ದೇವಣಗಾಂವ, ಸೋಮಶೇಖರ ಬಿಬ್ಬಳ್ಳಿ, ಬಿ.ಎಸ್.ಐನಾಪುರ ಇದ್ದರು.