ದೇವಾಂಗ ಕಲಾಪ್ರತಿಬೋತ್ಸವದ ಲಾಂಛನ ಅನಾವರಣ

ದೇವಾಂಗ ಕಲಾಪ್ರತಿಬೋತ್ಸವದ ಲಾಂಛನ ಅನಾವರಣ
Published on

ಹಾಸನ: ಜಿಲ್ಲಾ ದೇವಾಂಗ ನೌಕರರ ಸಂಘವು ಜಿಲ್ಲಾ ಹಾಗೂ ತಾಲೂಕಿನ ದೇವಾಂಗ ಸಂಘ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಆ.6ರಂದು ಆಯೋಜಿಸಿರುವ ದೇವಾಂಗ ಕಲಾ ಪ್ರತಿಭೋತ್ಸವದ ಲಾಂಛನವನ್ನು ಸೋಮವಾರ ಖಾಸಗಿ ರೆಸಾರ್ಟ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯ ದೇವಾಂಗ ನೌಕರರ ಸಂಘದ ಉಪಾಧ್ಯಕ್ಷ ಕೆ. ನಾಗೇಶ್ ಕುಮಾರ್, ದೇವಾಂಗ ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಯುವ ಜನಾಂಗವನ್ನು ಉತ್ತೇಜಿಸಲು ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘವು ಜಿಲ್ಲಾ ಹಾಗೂ ತಾಲೂಕಿನ ವಿವಿಧ ದೇವಾಂಗ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಆಗಸ್ಟ್ 6ರಂದು ಭಾನುವಾರ ದೇವಾಂಗ ಕಲಾ ಪ್ರತಿಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಕಲಾ ಪ್ರತಿಭೋತ್ಸವದ ಅಂಗವಾಗಿ ನೃತ್ಯ ಸ್ಪರ್ಧೆಯನ್ನು ಐದು ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, 12ರ ವಯೋಮಾನದವರೆಗೆ, 13ರಿಂದ 25, 26 ರಿಂದ 40, 41 ರಿಂದ 60 ಮತ್ತು 60 ವರ್ಷ ಮೇಲ್ಪಟ್ಟವರಿಗೆ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಐದೂ ವಿಭಾಗಕ್ಕೆ ಪ್ರಥಮ ಬಹುಮಾನ 5000 ರೂ., ದ್ವಿತೀಯ ಬಹುಮಾನ 3000 ರೂ. ಹಾಗೂ ತೃತೀಯ ಬಹುಮಾನವಾಗಿ 2000 ರೂ. ನಗದು ಬಹುಮಾನ ನೀಡಲಾಗುವುದು. ಹಾಸನ ಜಿಲ್ಲೆಯ ಸ್ಪರ್ಧಾಳುಗಳ ಜತೆಗೆ ಹಾಸನ ಮೂಲದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ದೇವಾಂಗ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿಮ್ಸ್‌ನ ಹಿರಿಯ ವೈದ್ಯ ಡಾಕ್ಟರ್ ಹಾಲೇಶ್, ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಎಸ್. ಸತೀಶ್, ಪ್ರಧಾನ ಕಾರ್ಯದರ್ಶಿ ಧರ್ಮೇಶ್, ವಸ್ತ್ರದಾತ ಪತ್ರಿಕೆಯ ಸಂಪಾದಕ ರಾಮಸ್ವಾಮಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net