ದೇವಸ್ಥಾನದ ಹೆಸರಿಗೆ ಖಾತೆ ಮಾಡಿ

Published on

 ಜಾಗದ ಹಕ್ಕು ಇಲ್ಲದೆ ಜಮೀನು ಅಭಿವೃದ್ಧಿಗೆ ಹಿನ್ನಡೆ

ತುಮಕೂರು: ನಗರದ ಶೆಟ್ಟಿಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ದೇವಸ್ಥಾನಕ್ಕೆ ಬಳಸಿಕೊಳ್ಳುತ್ತಿರುವ 2 ಎಕರೆ 30 ಗುಂಟೆ ಜಾಗವನ್ನು ದೇವಸ್ಥಾನದ ಹೆಸರಿಗೆ ಜಮೀನು ಖಾತೆ ಮಾಡುವಂತೆ ಭಕ್ತರು ಆಗ್ರಹಿಸಿದ್ದಾರೆ.

ಗ್ರಾಮದ ನಿವಾಸಿ, ನಿವೃತ್ತ ಇಂಜಿನಿಯರ್​ ಗುರುಸಿದ್ದಪ್ಪ ಮಾತನಾಡಿ, ಮುಜರಾಯಿ ಇಲಾಖೆಯ ಈ ದೇವಸ್ಥಾನವು ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುತ್ತಿದೆ. ದೇವಸ್ಥಾನದ ಅಭಿವೃದ್ಧಿಗಾಗಿ ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯಿಂದ 15 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿದ್ದು, ಆದರೆ, ದೇಗುಲದ ಹೆಸರಿಗೆ ಖಾತೆಯಾಗದ ಕಾರಣ ಸರ್ಕಾರದಿಂದ ಅನುದಾನ ಮಂಜೂರು ಮಾಡಲು ಸಾಧ್ಯವಾಗಿಲ್ಲ. ಜಾಗ ಈಗಲೂ ಗೋಮಾಳ ಎಂದು ದಾಖಲೆಯಲ್ಲಿದೆ. ಆದ್ದರಿಂದ ಆಂಜನೇಯಸ್ವಾಮಿ ಹೆಸರಿಗೆ ಮಾಡಿಕೊಡಬೇಕು ಎಂದರು.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಶಾಸಕ ಜಿ.ಬಿ.ಜ್ಯೋತಿಗಣೇಶ್​ ಗಮನಕ್ಕೂ ತರಲಾಗಿದೆ. ಅಗತ್ಯ ಅಭಿವೃದ್ಧಿ ಕಾರ್ಯಗಳ ಜತೆಗೆ ಭಕ್ತರಿಗೆ ಹೆಚ್ಚಿನ ಸೇವಾ ಸೌಕರ್ಯ ಒದಗಿಸಲೂ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಮಿತಿ ರಚನೆಗೆ ಪಟ್ಟು:  ಮುಜರಾಯಿ ಇಲಾಖೆ ಅಧಿಕಾರಿಗಳು ಒಂದು ವರ್ಷದಿಂದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿಲ್ಲ. ಈ ಬಗ್ಗೆ ಜಿಲ್ಲಾ ಸಚಿವರು, ಶಾಸಕರ ಗಮನಕ್ಕೆ ತಂದರೂ ಸಮಿತಿ ರಚನೆಗೆ ಆಸಕ್ತಿ ವಹಿಸಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶೀಘ್ರವಾಗಿ ಸಮಿತಿ ರಚಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮುಖಂಡ ಬಿ.ಜಯಕೀರ್ತಿ ಒತ್ತಾಯಿಸಿದರು.

ಡಿಸಿಗೆ ಮನವಿ : ಶೆಟ್ಟಿಹಳ್ಳಿ ಮುಖಂಡ ರಾಮಚಂದ್ರ ನಾಯಕ್​, ಟಿ.ಸಿ.ಜನಾರ್ದನ್​, ದೊಡ್ಡಹನುಮಂತಯ್ಯ, ಕುಮಾರಣ್ಣ, ಶಂಕರ್​ ಹಾಗೂ ಇತರರ ನಿಯೋಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net